ಮಂಗಳೂರು ವಿವಿ ಅಂತರ ಕಾಲೇಜು ಕಬಡ್ಡಿ ಪಂದ್ಯಾಟ: ಆಳ್ವಾಸ್ ಕಾಲೇಜು ಮೂಡಬಿದರೆ ಚಾಂಪಿಯನ್

ಉಡುಪಿ, ಫೆ.14: ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಮಂಗಳೂರು ವಿವಿ ಆಶ್ರಯದಲ್ಲಿ ತೆಂಕನಿಡಿಯೂರು ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟದ ಉಡುಪಿ ವಲಯದಲ್ಲಿ ಮೂಡುಬಿದರೆ ಆಳ್ವಾಸ್ ಕಾಲೇಜು ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.
ಆತಿಥೇಯ ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜು ರನ್ನರ್ ಅಪ್ ಪ್ರಶಸ್ತಿ ಪಡೆಯಿತು. ಮಂಗಳೂರು ವಿವಿ ಅಂತರ್ ವಲಯ ಮಟ್ಟದಲ್ಲಿ ಎಸ್‌ಡಿಎಂ ಉಜಿರೆ ಚಾಂಪಿಯನ್‌ಶಿಪ್ ಪಡೆದರೆ, ಆಳ್ವಾಸ್ ಕಾಲೇಜು ಮೂಡುಬಿದಿರೆ ರನ್ನರ್ಸ್ ಹಾಗೂ ಆತಿಥೇಯ ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಕಾಲೇಜು ತೃತೀಯ ಸ್ಥಾನ ಪಡೆದವು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್.ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ಮಾಜಿ ಕುಲಪತಿ ಡಾ. ಕಿಶೋರ್ ಕುಮಾರ್ ಸಿ.ಕೆ., ಕಾಲೇಜು ಅಭಿವೃದ್ಧಿ ಸಮಿತಿಯ ದಯಾನಂದ ಶೆಟ್ಟಿ, ಹರಿದಾಸ್ ಕೂಳೂರು, ಹಿರಿಯಡ್ಕ ಸರಕಾರಿ ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನಾ, ಪ್ರೊ.ಪ್ರಸಾದ್ ರಾವ್ ಎಂ. ಮತ್ತಿತರರು ಉಪಸ್ಥಿತರಿದ್ದರು.





