ಅನುಮತಿ ಪಡೆಯದೆ ಮಾಧ್ಯಮ, ಪೊಲೀಸರನ್ನು ಸಂಪರ್ಕಿಸಬೇಡಿ
ವಿದೇಶಿ ವಿದ್ಯಾರ್ಥಿಗಳಿಗೆ ಗುಜರಾತ್ ವಿವಿ ಸೂಚನೆ!

ಗಾಂಧೀನಗರ, ಫೆ.14: ವಿವಿಯ ಅಧಿಕಾರಿಗಳಿಂದ ಅನುಮತಿ ಪಡೆಯದೆ ಮಾಧ್ಯಮ ಅಥವಾ ಪೊಲೀಸರನ್ನು ಸಂಪರ್ಕಿಸುವುದಿಲ್ಲ ಎಂಬ ಮುಚ್ಚಳಿಕೆಗೆ ಸಹಿ ಹಾಕುವಂತೆ ಗುಜರಾತ್ ವಿವಿ ಸುಮಾರು 300 ವಿದೇಶಿ ವಿದ್ಯಾರ್ಥಿಗಳಿಗೆ ಸೂಚಿಸಿದೆ ಎಂದು ಮಾಧ್ಯಮ ಸಂಸ್ಥೆ ವರದಿ ಮಾಡಿದೆ.
ವಿದೇಶದಲ್ಲಿ ಅಧ್ಯಯನ ಯೋಜನೆಯಡಿ ಗುಜರಾತ್ ವಿವಿಯಲ್ಲಿ ಸುಮಾರು 300 ವಿದೇಶಿ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಇವರಲ್ಲಿ ದಕ್ಷಿಣ ಏಶ್ಯಾದ ರಾಷ್ಟ್ರಗಳ ಕೆಲವು ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿರುವ ಇಕ್ಕಟ್ಟಿನ ವ್ಯವಸ್ಥೆ ಹಾಗೂ ನೈರ್ಮಲ್ಯದ ಕೊರತೆಯ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ವಿವಿಯ ಅಧಿಕಾರಿಗಳ ಪೂರ್ವಾನುಮತಿ ಪಡೆಯದೆ ಮಾಧ್ಯಮ ಅಥವಾ ಪೊಲೀಸರನ್ನು ಸಂಪರ್ಕಿಸಿ ನೀತಿ ಸಂಹಿತೆ ಉಲ್ಲಂಘಿಸುವ ವಿದ್ಯಾರ್ಥಿಗಳನ್ನು ಅವರ ದೇಶಕ್ಕೆ ವಾಪಾಸು ಕಳಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಮಧ್ಯೆ, 2018ರ ಸೆಪ್ಟೆಂಬರ್‌ನಲ್ಲಿ , ವಿವಿಯ ಅಹ್ಮದಾಬಾದ್ ಕ್ಯಾಂಪಸ್‌ನಲ್ಲಿ ವಾಸವಿದ್ದ 35 ಅಫ್ಘಾನ್ ವಿದ್ಯಾರ್ಥಿಗಳ ಆಹಾರ ಅಭ್ಯಾಸ ಮತ್ತು ಸಂಸ್ಕೃತಿಯನ್ನು ಗಮನಿಸಿ , ಅವರ ಇಚ್ಛೆಗೆ ವಿರುದ್ಧವಾಗಿ ಲಾಲ್ ದರ್ವಾಝದಲ್ಲಿರುವ ಮುಸ್ಲಿಮ್ ಪ್ರಾಬಲ್ಯದ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದು ಮಾಂಸಾಹಾರ ಲಭ್ಯವಾಗುತ್ತಿಲ್ಲ ಎಂದು ದೂರಿದ್ದರು. ಹಾಗಾಗಿ ಅವರ ಆಹಾರ ಅಭ್ಯಾಸ ಹಾಗೂ ಸಂಸ್ಕೃತಿಯನ್ನು ಗಮನಿಸಿ ಅವರನ್ನು ಸ್ಥಳಾಂತರಿಸಲಾಗಿದೆ ಎಂದು ವಿದೇಶ ಅಧ್ಯಯನ ಯೋಜನೆಯ ಸಲಹೆಗಾರರಾಗಿರುವ ನೀರಜಾ ಗುಪ್ತ ತಿಳಿಸಿದ್ದಾರೆ. ಹಾಸ್ಟೆಲ್‌ನ ಸ್ಥಿತಿಗತಿಯ ಬಗ್ಗೆ ದೂರಿ ಕೆಲವು ವಿದ್ಯಾರ್ಥಿಗಳು ಸ್ಥಳೀಯ ಟಿವಿ ಚಾನೆಲ್‌ಗೆ ತಿಳಿಸಿದ್ದಾರೆ. ಹೀಗೆ ಮಾಡುವುದರಿಂದ ವಿವಿಯ ಘನತೆಗೆ ಕುಂದುಂಟಾಗುತ್ತದೆ ಎಂದವರು ತಿಳಿಸಿದ್ದಾರೆ.
ಈ ಮಧ್ಯೆ, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಿದೇಶಿ ವಿದ್ಯಾರ್ಥಿಯೋರ್ವ, ಮನೆಯಿಂದ ವೀಡಿಯೊ ಕಾಲ್ ಬಂದಾಗ ತಾನು ತಕ್ಷಣ ಹಾಸ್ಟೆಲ್‌ನ ಟೆರೇಸ್‌ಗೆ ಓಡುತ್ತೇನೆ. ಹಾಸ್ಟೆಲ್ ಒಳಗಿನ ಅವ್ಯವಸ್ಥೆ ಮನೆಯವರಿಗೆ ತಿಳಿದರೆ ಅವರು ಬೇಸರಪಟ್ಟುಕೊಳ್ಳುತ್ತಾರೆ. ವಿವಿಗೆ ಸೇರ್ಪಡೆಗೊಳ್ಳುವಾಗ ಇಲ್ಲಿ ಇಂತಹ ಸಮಸ್ಯೆ ಇರುತ್ತದೆ ಎಂದು ತಿಳಿದಿರಲಿಲ್ಲ ಎಂದು ಹೇಳಿದ್ದಾನೆ.







