ಫೋನ್ ಕದ್ದಾಲಿಕೆ ಅನುಮತಿಗಳ ಕುರಿತು ಮಾಹಿತಿ ಬಹಿರಂಗಗೊಳಿಸುವಂತಿಲ್ಲ: ಕೇಂದ್ರ ಗೃಹ ಸಚಿವಾಲಯ

ಹೊಸದಿಲ್ಲಿ,ಫೆ.14: ಫೋನ್ ಗಳ ಕದ್ದಾಲಿಕೆಗೆ ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ನೀಡಿರುವ ಅನುಮತಿಗಳ ಕುರಿತು ಮಾಹಿತಿಗಳನ್ನ್ನು ಬಹಿರಂಗಗೊಳಿಸಲು ಆರ್‌ಟಿಐ ಉತ್ತರವೊಂದರಲ್ಲಿ ನಿರಾಕರಿಸಿರುವ ಕೇಂದ್ರ ಗೃಹ ಸಚಿವಾಲಯವು, ಹಾಗೆ ಮಾಡುವುದರಿಂದ ಸರಕಾರದ ಹಿತಾಸಕ್ತಿಯ ಮೇಲೆ ದುಷ್ಪರಿಣಾಮವಾಗುತ್ತದೆ,ಅದು ವ್ಯಕ್ತಿಗೆ ಅಪಾಯವನ್ನುಂಟು ಮಾಡಬಹುದು ಅಥವಾ ತನಿಖೆಯ ಪ್ರಗತಿಗೆ ಅಡ್ಡಿಯನ್ನುಂಟು ಮಾಡಬಹುದು ಎಂದು ತಿಳಿಸಿದೆ.
ಗೃಹ ಸಚಿವಾಲಯವು 2009ರಿಂದ 2018ರ ನಡುವೆ ಫೋನ್‌ಗಳ ಕದ್ದಾಲಿಕೆಗೆ ಕೇಂದ್ರೀಯ ಸಂಸ್ಥೆಗಳಿಗೆ ನೀಡಿದ್ದ ಅನುಮತಿಗಳ ಸಂಖ್ಯೆಯನ್ನು ತಿಳಿಸುವಂತೆ ಅರ್ಜಿದಾರರು ಕೋರಿದ್ದರು. ತನಿಖಾ ಸಂಸ್ಥೆಯೊಂದು ಕೇಳಿದ್ದ ಅನುಮತಿಗಳ ಸಂಖ್ಯೆ ಮತ್ತು ಸಚಿವಾಲಯದಿಂದ ಅನುಮತಿಗಳ ನಿರಾಕರಣೆಗೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸುವಂತೆಯೂ ಅವರು ಕೋರಿದ್ದರು.
ಅರ್ಜಿದಾರರು ಕೋರಿರುವ ಮಾಹಿತಿಗಳು ಮಾಹಿತಿ ಹಕ್ಕು ಕಾಯ್ದೆಯ 8(10)(ಎ),8(1)(ಜಿ)ಮತ್ತು 8(1)(ಎಚ್) ಕಲಮ್‌ಗಳಡಿ ಬಹಿರಂಗಗೊಳಿಸುವುದರಿಂದ ವಿನಾಯಿತಿ ಹೊಂದಿವೆ ಎಂದು ಸಚಿವಾಲಯವು ತನ್ನ ಉತ್ತರದಲ್ಲಿ ತಿಳಿಸಿದೆ.





