ಎಸ್‌ಎಲ್‌ಎಂಆರ್ ಘಟಕದಿಂದ ಗ್ರಾಮಗಳು ತ್ಯಾಜ್ಯಮುಕ್ತ
ಉಡುಪಿ, ಫೆ.14: ತ್ಯಾಜ್ಯ ನಿರ್ವಹಣೆ ಜಿಲ್ಲೆಯ ಎಲ್ಲಾ ಗ್ರಾಪಂಗಳ ಪ್ರಮುಖ ಸಮಸ್ಯೆಯಾಗಿದ್ದು, ಜಿಲ್ಲೆಯಲ್ಲಿ ಈಗಾಗಲೇ 26 ಗ್ರಾಪಂಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ಘನ, ದ್ರವ ತ್ಯಾಜ್ಯ ವಿಲೇವಾರಿಯ ಸಮಸ್ಯೆ ಬಹುತೇಕ ಬಗೆಹರಿದಿದೆ ಎಂದು ಉಡುಪಿ ಜಿಪಂನ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅಲ್ಲಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಪ್ರಾರಂಭಿಸಿರುವುದರಿಂದ, ತ್ಯಾಜ್ಯ ವಿಲೇವಾರಿಯಲ್ಲಿ ಉಡುಪಿ ಜಿಲ್ಲೆ ರಾಜ್ಯದ ಇತರ ಜಿಲ್ಲೆಗಳಿಗೆ ಮಾದರಿಯಾಗಿದ್ದು, ಇತರ ಜಿಲ್ಲೆಗಳ ಅಧಿಕಾರಿಗಳು ಜಿಲ್ಲೆಯ ತ್ಯಾಜ್ಯ ವಿಲೇವಾರಿ ಘಟಕದ ಕಾರ್ಯವನ್ನು ವೀಕ್ಷಿಸಿ, ತಮ್ಮ ಗ್ರಾಪಂಗಳಲ್ಲಿ ತ್ಯಾಜ್ಯ ವಿಲೇವಾರಿ ಘಟವನ್ನು ಸ್ಥಾಪಿಸಲು ಮುಂದಾಗಿದ್ದಾರೆ.
ಜಿಲ್ಲೆಯ ಇನ್ನೂ ಅನೇಕ ಗ್ರಾಪಂಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಪ್ರಾರಂಭಕ್ಕೆ ಜಾಗದ ಸಮಸ್ಯೆಯಿರುವುದರಿಂದ, ಒಂದೊಂದೇ ಗ್ರಾಪಂಗಳು ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವ ಬದಲು ಎರಡು-ಮೂರು ಗ್ರಾಪಂಗಳು ಒಟ್ಟಿಗೆ ಸೇರಿ ತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಿದರೆ ಈ ಯೋಜನೆ ಇನ್ನಷ್ಟು ಯಶಸ್ಸು ಕಾಣಬಹುದು. ಜಿಲ್ಲೆಯ ವಂಡ್ಸೆಯಲ್ಲಿ ಪ್ರಥಮ ಬಾರಿಗೆ ತ್ಯಾಜ್ಯ ನಿರ್ವಹಣೆ ಘಟಕ ಆರಂಭವಾಗಿದ್ದು, ಅದು ಅತ್ಯಂತ ಯಶಸ್ವಿಯಾಗಿ, ಲಾಭದಾಯಕವಾಗಿ ಕಾರ್ಯನಿರ್ವಹಿಸುತ್ತಿದೆ.
ಜಿಲ್ಲೆಯಲ್ಲಿ ನಡೆಯುವ ಜಾತ್ರೆಗಳಲ್ಲಿ ಸೃಷ್ಠಿಯಾಗುವ ತ್ಯಾಜ್ಯವನ್ನು ಸಹ ಎಸ್‌ಎಲ್‌ಆರ್‌ಎಂನ ಸಹಾಯದೊಂದಿಗೆ ವಿಲೇವಾರಿ ಮಾಡಿದರೆ, ತ್ಯಾಜ್ಯ ನಿರ್ವಹಣೆಗೆ ಸುಲಭವಾಗುತ್ತದೆ. ಇದುವರೆಗೆ ಜಿಲ್ಲೆಯ ಎಸ್‌ಎಲ್‌ಆರ್‌ಎಂ ಘಟಕಗಳಲ್ಲಿ 1200 ಟನ್‌ಗಳಷ್ಟು ತ್ಯಾಜ್ಯವನ್ನು ಸಂಗ್ರಹಿಸಿದ್ದು, ತ್ಯಾಜ್ಯವನ್ನು ವಿಂಗಡಿಸಿ,ಮಾರಾಟ ಮಾಡುವ ಮೂಲಕ ಅಂದಾಜು 20 ಲಕ್ಷ ರೂ. ಆದಾಯ ಬಂದಿದೆ. ಅಲ್ಲದ ಸುಮಾರು 200 ಮಂದಿ ಈ ಯೋಜನೆಯಿಂದ ಉದ್ಯೋಗಾವಕಾಶವನ್ನೂ ಪಡೆದುಕೊಂಡಿದ್ದಾರೆ.
ತ್ಯಾಜ್ಯ ಸಮಸ್ಯೆಯಿಂದ ಬಳಲುತ್ತಿರುವ ಪಂಚಾಯತ್‌ಗಳ ಜನಪ್ರತಿನಿಧಿಗಳು ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಘಟಕ ಪ್ರಾರಂಭಿಸುವುದರಿಂದ ತ್ಯಾಜ್ಯ ಸಮಸ್ಯೆ ಯಿಂದ ಮುಕ್ತಿ ಪಡೆಯಬಹುದಾಗಿದೆ. ಹಿಂದೆ ತ್ಯಾಜ್ಯ ಸಮಸ್ಯೆಯಿಂದ ಬಳಲುತ್ತಿದ್ದ ಗ್ರಾಪಂಗಳು ಎಸ್‌ಎಲ್‌ಆರ್‌ಎಂ ಘಟಕ ಸ್ಥಾಪನೆಯಿಂದ ತ್ಯಾಜ್ಯ ಮುಕ್ತಗೊಂಡು ನಿರ್ಮಲವಾಗಿವೆ. ಹೊಸದಾಗಿ ಘಟಕ ಆರಂಭಿಸುವುದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ಜಿಪಂನಿಂದ ನೀಡಲಾಗುವುದು ಎಂದು ಶ್ರೀನಿವಾಸ ರಾವ್ ತಿಳಿಸಿದ್ದಾರೆ.







