ಫೆ.16 ರಿಂದ ಕೃಷ್ಣ ಮಠದಲ್ಲಿ ಅಖಂಡ ಭಾಗವತ ಪ್ರವಚನ
ಉಡುಪಿ, ಫೆ.14: ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ಫೆ.16ರಂದು ಬೆಳಗ್ಗೆ 5ರಿಂದ 17ರ ಬೆಳಗ್ಗೆ 5 ಗಂಟೆಯವರೆಗೆ 16 ಮಂದಿ ಮಠಾಧೀಶರಿಂದ ಅಖಂ ಭಾಗವತ ಪ್ರವಚನ ನಡೆಯಲಿದೆ.
ಫೆ.16ರಂದು ಬೆಳಗ್ಗೆ 5ಕ್ಕೆ ಉತ್ತರಾದಿ ಮಠದ ಶ್ರೀಸತ್ಯಾತ್ಮ ತೀರ್ಥ ಸ್ವಾಮೀಜಿ ಪ್ರಥಮ ಸ್ಕಂದ ಪ್ರವಚನದೊಂದಿಗೆ ಭಾಗವತ ದಿನ ಪ್ರಾರಂಭವಾಗಲಿದೆ. ಬೆಳಗ್ಗೆ 7ಕ್ಕೆ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಮತ್ತು 8ಕ್ಕೆ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ದ್ವಿತೀಯ ಸ್ಕಂದ, 9ಕ್ಕೆ ಅದಮಾರು ಮಠದ ವಿಶ್ವಪ್ರಿಯತೀರ್ಥ ಸ್ವಾಮೀಜಿ ತೃತೀಯ ಸ್ಕಂದ, 11ಕ್ಕೆ ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಚತುರ್ಥ ಸ್ಕಂದ, ಅಪರಾಹ್ನ 1:00ಕ್ಕೆ ತಂಬಿಹಳ್ಳಿ ಮಠದ ವಿದ್ಯಾಸಿಂಧು ಮಾಧವ ತೀರ್ಥ ಸ್ವಾಮೀಜಿ ಪಂಚಮ ಸ್ಕಂದ ಪ್ರವಚನ ಮಾಡಲಿದ್ದಾರೆ.
ಅಪರಾಹ್ನ 3ಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ 4ಕ್ಕೆ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಷಷ್ಠ ಸ್ಕಂದ, ಸಾಯಂಕಾಲ 5ಕ್ಕೆ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹಾಗೂ 6ಕ್ಕೆ ಸೋಸಲೆ ವ್ಯಾಸರಾಜ ಮಠದ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಸಪ್ತಮ ಸ್ಕಂದ, ಸಾಯಂಕಾಲ 7ಕ್ಕೆ ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಅಷ್ಟಮ ಸ್ಕಂದ, ರಾತ್ರಿ 9ಕ್ಕೆ ಕೂಡ್ಲಿ ಮಠದ ಶ್ರೀ ರಘುವಿಜಯ ತೀರ್ಥ ಸ್ವಾಮೀಜಿ, 10ಕ್ಕೆ ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರ ತೀರ್ಥ ಸ್ವಾಮೀಜಿ ನವಮ ಸ್ಕಂದ, ರಾತ್ರಿ 11ಕ್ಕೆ ಶ್ರೀ ಸುವಿದ್ಯೇಂದ್ರ ತೀರ್ಥರಿಂದ ದಶಮ ಸ್ಕಂದ, ಮಧ್ಯರಾತ್ರಿ 1ಕ್ಕೆ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಏಕಾದಶ ಸ್ಕಂದ ಪ್ರವಚನ ನೀಡಲಿದ್ದಾರೆ. ಬೆಳಗ್ಗಿನ ಜಾವ 3ಕ್ಕೆ ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ದ್ವಾದಶ ಸ್ಕಂದ ಪ್ರವಚನದೊಂದಿಗೆ ಭಾಗವತ ದಿನ ಸಂಪನ್ನಗೊಳ್ಳಲಿದೆ.
ಪ್ರತೀ ಸ್ಕಂದ ಪ್ರವಚನಾಂತ್ಯದಲ್ಲಿ ರಸಪ್ರಶ್ನೆ ಸ್ಪರ್ಧೆ, ಧ್ಯಾನ, ಭಜನೆ ನಡೆಯಲಿದೆ. ಪ್ರತೀಸ್ಕಂದಕ್ಕೆ ಸಂಬಂಧಪಟ್ಟಂತೆ 10 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಒಟ್ಟು 12 ಸ್ಕಂದಕ್ಕೆ 120 ರಸಪ್ರಶ್ನೆ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ಪರ್ಯಾಯ ಶ್ರೀಪಾದರು ಬಹುಮಾನ ವಿತರಿಸಲಿದ್ದಾರೆ. ಅಖಂಡ ಭಾಗವತ ಪ್ರವಚನ ಮುಗಿದ ಬಳಿಕ ರಥಬೀದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯಲಿದ್ದು, ರಥಬೀದಿ ಸುತ್ತ ರಂಗೋಲಿಯನ್ನು ಬಿಡಿಸಲಾಗುವುದು.







