ಇರಾನಿ ಕಪ್: ಅಕ್ಷಯ್ ಚೊಚ್ಚಲ ಶತಕ,ವಿದರ್ಭಕ್ಕೆ ಮುನ್ನಡೆ
ಹನುಮ ವಿಹಾರಿ- ಅಜಿಂಕ್ಯ ರಹಾನೆ ಮರು ಹೋರಾಟ

ನಾಗ್ಪುರ, ಫೆ.14: ಇರಾನಿ ಕಪ್‌ನ ಮೂರನೇ ದಿನವಾದ ಗುರುವಾರ ವಿದರ್ಭದ ಅಕ್ಷಯ್ ಕರ್ನೆವಾರ್ ಪಾಲಿಗೆ ಶುಭ ದಿನವಾಗಿತ್ತು. ಚೊಚ್ಚಲ ಶತಕ ಸಿಡಿಸಿದ ಕೆಳ ಕ್ರಮಾಂಕದ ದಾಂಡಿಗ ಕರ್ನೆವಾಲ್ ರಣಜಿ ಟ್ರೋಫಿ ಚಾಂಪಿಯನ್ ತಂಡಕ್ಕೆ ಶೇಷ ಭಾರತ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 95 ರನ್ ಮುನ್ನಡೆ ಪಡೆಯಲು ಪ್ರಮುಖ ಪಾತ್ರವಹಿಸಿದರು.
ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿರುವ ಶೇಷ ಭಾರತ ದಿನದಾಟದಂತ್ಯಕ್ಕೆ 2ನೇ ಇನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿದೆ. ಹನುಮ ವಿಹಾರಿ(40) ಹಾಗೂ ನಾಯಕ ಅಜಿಂಕ್ಯ ರಹಾನೆ(25)ಮೂರನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 56 ರನ್ ಗಳಿಸಿ ತಿರುಗೇಟು ನೀಡಲು ಯತ್ನಿಸುತ್ತಿದ್ದಾರೆ. ಶೇಷ ಭಾರತ ಇದೀಗ 7 ರನ್ ಮುನ್ನಡೆಯಲ್ಲಿದೆ.
ಮೊದಲ ಇನಿಂಗ್ಸ್‌ನಲ್ಲಿ 95 ರನ್ ಗಳಿಸಿದ್ದ ಮಾಯಾಂಕ್ ಅಗರ್ವಾಲ್ 12ನೇ ಓವರ್‌ನಲ್ಲಿ 27 ರನ್‌ಗೆ ಔಟಾಗಿದ್ದಾರೆ. ಅಮೋಲ್‌ಪ್ರೀತ್ ಸಿಂಗ್(6) ಮತ್ತೊಮ್ಮೆ ವಿಫಲರಾಗಿದ್ದಾರೆ.
ಅಕ್ಷಯ್ ಅಬ್ಬರ, ವಿದರ್ಭ 425 ರನ್
ಇದಕ್ಕೂ ಮೊದಲು 6 ವಿಕೆಟ್‌ಗೆ 245 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ವಿದರ್ಭಕ್ಕೆ ಅಕ್ಷಯ್ ಕರ್ನೆವಾರ್(102,133 ಎಸೆತ, 13 ಬೌಂಡರಿ, 2 ಸಿಕ್ಸರ್)ಹಾಗೂ ಅಕ್ಷಯ್ ವಾಡ್ಕರ್(73,139 ಎಸೆತ, 14 ಬೌಂಡರಿ)ಆಸರೆಯಾದರು. ಶೇಷ ಭಾರತದ ಮೊದಲ ಇನಿಂಗ್ಸ್ ಮೊತ್ತ 331ಕ್ಕೆ ಉತ್ತರವಾಗಿ ವಿದರ್ಭ 425 ರನ್ ಗಳಿಸಿತು. ಕರ್ನೆವಾರ್‌ಗೆ 50 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ವಾಡ್ಕರ್ ಉತ್ತಮ ಸಾಥ್ ನೀಡಿದರು.7ನೇ ವಿಕೆಟ್‌ಗೆ 79 ರನ್ ಜೊತೆಯಾಟ ನಡೆಸಿದರು.
ಭೋಜನ ವಿರಾಮಕ್ಕೆ ಮೊದಲೇ ವಾಡ್ಕರ್ ಔಟಾದರೂ ದೃತಿಗೆಡದ ಕರ್ನೆವಾರ್ ತನ್ನ ಆಕ್ರಮಣಕಾರಿ ಆಟ ಮುಂದುವರಿಸಿದರು. 9ನೇ ಕ್ರಮಾಂಕದ ಆಟಗಾರ ಅಕ್ಷಯ್ ವಖಾರೆ(20)ತನ್ನ ಪಾಲಿನ ಕೊಡುಗೆ ನೀಡಿದ್ದು, ಕರ್ನೆವಾರ್ರೊಂದಿಗೆ 8ನೇ ವಿಕೆಟ್‌ಗೆ ಉಪಯುಕ್ತ 76 ರನ್ ಸೇರಿಸಿದರು. ಭೋಜನ ವಿರಾಮದ ಬಳಿಕ ಕರ್ನೆವಾರ್ವಿಕೆಟನ್ನು ಪಡೆದ ರಾಹುಲ್ ಚಹಾರ್ ಈ ಜೋಡಿಯನ್ನು ಬೇರ್ಪಡಿಸಿದರು. ಏಕಾಂಗಿ ಹೋರಾಟ ನೀಡಿದ ಕರ್ನೆವಾರ್ ವಿಕೆಟ್ ಒಪ್ಪಿಸಿದಾಗ ವಿದರ್ಭ 56 ರನ್ ಮುನ್ನಡೆಯಲ್ಲಿತ್ತು. ಯಶ್ ಠಾಕೂರ್(10) ಹಾಗೂ ರಜನೀಶ್ ಗುರ್ಬಾನಿ(ಔಟಾಗದೆ 28)ಕೊನೆಯ ವಿಕೆಟ್‌ನಲ್ಲಿ ಅಮೂಲ್ಯ 39 ರನ್ ಜೊತೆಯಾಟದಲ್ಲಿ ಭಾಗಿಯಾಗಿ ವಿದರ್ಭದ ಸ್ಕೋರನ್ನು 400ರ ಗಡಿ ದಾಟಿಸಿದರು. ಅಂಕಿತ್ ರಾಜ್‌ಪೂತ್ ಅವರು ಠಾಕೂರ್‌ರನ್ನು ಎಲ್ಬಿಡಬ್ಲು ಬಲೆಗೆ ಬೀಳಿಸುವುದರೊಂದಿಗೆ ವಿದರ್ಭದ ಮೊದಲ ಇನಿಂಗ್ಸ್‌ಗೆ ತೆರೆ ಎಳೆದರು.
19ರ ಹರೆಯದ ರಾಹುಲ್ ಚಹಾರ್ 112 ರನ್‌ಗೆ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು. ಚಹಾರ್ ವಿದರ್ಭದ ಇಬ್ಬರು ಅಗ್ರ ಸ್ಕೋರರ್‌ಗಳಾದ ಕರ್ನೆವಾರ್ ಹಾಗೂ ವಾಡ್ಕರ್ ವಿಕೆಟನ್ನು ಪಡೆದು ಶೇಷ ಭಾರತದ ಪರ ಯಶಸ್ವಿ ಪ್ರದರ್ಶನ ನೀಡಿದರು. ಬೆಳಗ್ಗೆ 15 ರನ್‌ನಿಂದ ಬ್ಯಾಟಿಂಗ್ ಆರಂಭಿಸಿದ ಕರ್ನೆವಾರ್ ರಾಜ್‌ಪೂತ್ ಬೌಲಿಂಗ್‌ನಲ್ಲಿ ಸತತ 3 ಬೌಂಡರಿ ಗಳಿಸಿ ವಿದರ್ಭಕ್ಕೆ ಮಿಂಚಿನ ಆರಂಭ ನೀಡಿದರು. ಭೋಜನ ವಿರಾಮಕ್ಕೆ ಮೊದಲೇ ಧರ್ಮೇಂದ್ರ ಸಿನ್ಹಾ ಜಡೇಜ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸಿದ ಕರ್ನೆವಾರ್ ತನ್ನ ಚೊಚ್ಚಲ ಶತಕವನ್ನು ಆಕರ್ಷಕವಾಗಿ ಪೂರೈಸಿದರು.
ರಾತ್ರಿ ಮಳೆ ಸುರಿಯುವ ಸಾಧ್ಯತೆಯಿದೆ. ಒಂದು ವೇಳೆ ಪಂದ್ಯ ಡ್ರಾನಲ್ಲಿ ಕೊನೆಗೊಂಡರೆ, ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿರುವ ವಿದರ್ಭ ಸತತ ಎರಡನೇ ವರ್ಷ ಇರಾನಿ ಕಪ್‌ನ್ನು ಎತ್ತಿ ಹಿಡಿಯಲಿದೆ. ಆದರೆ,ಇನ್ನೂ 180 ಓವರ್‌ಗಳ ಆಟ ಆಡಲು ಬಾಕಿ ಇದೆ.







