ಕುಂದಾಪುರ: ವಿವಿಧ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಭೇಟಿ

ಉಡುಪಿ, ಫೆ.15: ಜಿಲ್ಲೆಯ ಕುಂದಾಪುರ ತಾಲೂಕಿನ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದ ಉಡುಪಿ ಜಿಲ್ಲಾದಿಕಾರಿ ಹಪ್ಸಿಬಾ ರಾಣಿ ಕೊರ್ಲಪಾಟಿ ಅವರು ಅಲ್ಲಿರುವ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರಲ್ಲದೇ, ಇನ್ನಷ್ಟು ಸೌಲಭ್ಯಗಳನ್ನು ಮತದಾರರಿಗೆ ನೀಡುವ ಕುರಿತು ಸಲಹೆ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು.
ಕುಂದಾಪುರ ಕಸಬಾ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜು, ಆನಗಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಖಾರ್ವಿಕೇರಿ, ನಿವೇದಿತಾ ಹೈಸ್ಕೂಲ್ ಬಸ್ರೂರು, ಶಾರದಾ ಪ್ರಥಮ ದರ್ಜೆ ಕಾಲೇಜು ಬಸ್ರೂರಿನ ಮತಗಟ್ಟೆಗಳಿಗೆ ಅವರು ಭೇಟಿ ನೀಡಿದರು.
ಈ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್, ಶೌಚಾಲಯ, ರ್ಯಾಂಪ್ ಹಾಗೂ ಕಟ್ಟಡ ದುರಸ್ಥಿ ಮಾಡಲಾಗಿದೆಯೇ ಎಂಬ ಬಗ್ಗೆ ತಹಶೀಲ್ದಾರರು, ಸೆಕ್ಟರ್ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮಕರಣಿಕರು ಹಾಗೂ ಬಿಎಲ್‌ಓಗಳೊಂದಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು.
ಆನಗಳ್ಳಿ ಗ್ರಾಮದ ಕಳಂಜಿ ಪ್ರದೇಶದಲ್ಲಿನ ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಗೊಂಡ ಮತದಾರರ ಮನೆಗಳಿಗೆ ಭೇಟಿ ಮಾಡಿ ಪರಿಶೀಲಿಸಿದರು. ನಿವೇದಿತಾ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಗಳೊಂದಿಗೆ ಮತದಾರರ ಹಕ್ಕುಗಳ ಬಗ್ಗೆ ಸಂವಾದ ನಡೆಸಲಾಯಿತು. ಮುಂಬರುವ ಎಸ್ಸೆಸೆಲ್ಸಿ ಅಂತಿಮ ಪರೀಕ್ಷೆ ಪೂರ್ವತಯಾರಿ ಬಗ್ಗೆ ವಿದ್ಯಾರ್ಥಿ ಗಳಿಗೆ ಸಲಹೆಗಳನ್ನು ನೀಡಿದ ಜಿಲ್ಲಾಧಿಕಾರಿ, ಶಿಕ್ಷಕರಿಗೆ ಉತ್ತಮ ತರಬೇತಿ ನೀಡುವಂತೆ ಮಾರ್ಗದರ್ಶನ ನೀಡಿದರು.
ಬಸ್ರೂರಿನ ಶಾರದಾ ಕಾಲೇಜಿನಲ್ಲಿ ಹೊಸ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಗೊಳಿಸಲು ಸಂಗ್ರಹಿಸಿಟ್ಟ ನಮೂನೆ 6ನ್ನು ಪರಿಶೀಲಿಸಿದರು. ಕುಂದಾಪುರ ಟೌನ್ ಖಾರ್ವಿಕೇರಿಯಲ್ಲಿ ಮತಗಟ್ಟೆ ಸಂಖ್ಯೆ 7 ಮತ್ತು 8ಕ್ಕೆ ಭೇಟಿ ನೀಡಿ ಚುನಾವಣೆ ಮೂಲ ಸೌಕರ್ಯಗಳ ಬಗ್ಗೆ ಸಿಬ್ಬಂದಿಗಳೊಂದಿಗೆ ಪರಿಶೀಲನೆ ನಡೆಸಿದರು.
ಬಿಎಲ್‌ಓಗಳು ಗುರುತಿನ ಚೀಟಿಯನ್ನು ಸಂಬಂಧಪಟ್ಟ ಮತದಾರರಿಗೆ ನೀಡಿದ ಬಗ್ಗೆ ಹಾಗೂ ಕುಂದಾಪುರ ತಾಲೂಕು ಕಛೇರಿಯ ಚುನಾವಣಾ ಶಾಖೆ ಯಲ್ಲಿ ನಮೂನೆ 6ರ ಡಾಟಾ ಎಂಟ್ರಿ ಪ್ರಗತಿಯನ್ನು ಹಪ್ಸಿಬಾ ರಾಣಿ ಪರಿಶೀಲನೆ ನಡೆಸಿದರು.








