ಪಾಕಿಸ್ತಾನಕ್ಕೆ ಎಲ್ಲ ದೇಶಗಳಿಂದ ಆರ್ಥಿಕ ದಿಗ್ಬಂಧನ: ಡಿ.ವಿ.ಸದಾನಂದಗೌಡ

ಬೆಂಗಳೂರು, ಫೆ.16: ಪಾಕಿಸ್ತಾನವು ಮುಂದಿನ ದಿನಗಳಲ್ಲಿ ಏಕಾಂಗಿಯಾಗಲಿದೆ. ಎಲ್ಲ ದೇಶಗಳಿಂದ ಪಾಕಿಸ್ತಾನಕ್ಕೆ ಆರ್ಥಿಕ ದಿಗ್ಬಂಧನ ಹಾಕಲಾಗುತ್ತಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಮಾಡಿರುವ ದ್ರೋಹದ ಕೆಲಸವನ್ನು ಯಾರೂ ಕೂಡ ಕ್ಷಮಿಸುವುದಿಲ್ಲ. ಪ್ರಧಾನಿ ನರೇಂದ್ರಮೋದಿ ದೇಶದ ಸೇನೆಗೆ ಸಂಪೂರ್ಣ ಅಧಿಕಾರ ನೀಡಿದ್ದಾರೆ ಎಂದರು.
ನಮ್ಮನ್ನು ಹಾಗೂ ದೇಶದ ಗಡಿಯನ್ನು ಕಾಯುವ ಯೋಧರ ಒಂದು ತೊಟ್ಟು ರಕ್ತಕ್ಕೂ ಅಪಮಾನವಾಗದ ರೀತಿಯಲ್ಲಿ ಕಾರ್ಯಾಚರಣೆ ಮಾಡಲಾಗುವುದು. ಈ ಸಂಬಂಧ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸೇನೆಯ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಅವರು ಹೇಳಿದರು.
ಪುಲ್ವಾಮಾ ಘಟನೆಯಲ್ಲಿ ಹುತಾತ್ಮರಾದ ಮಂಡ್ಯ ಜಿಲ್ಲೆಯ ಯೋಧ ಗುರು ಅವರ ಪಾರ್ಥಿವ ಶರೀರವನ್ನು ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತರಲಾಗುತ್ತಿದ್ದು, ಅಲ್ಲಿ ಅಗಲಿದ ಯೋಧನಿಗೆ ಸಕಲ ಸರಕಾರಿ ಗೌರವ ಸಲ್ಲಿಸಲಾಗುವುದು. ಆನಂತರ, ಅವರ ಗ್ರಾಮದಲ್ಲಿ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ನಾವು ಪಾಲ್ಗೊಳ್ಳಲಿದ್ದೇವೆ ಎಂದು ಸದಾನಂದಗೌಡ ತಿಳಿಸಿದರು.
ಇದಕ್ಕೂ ಮೊದಲು ಯಶವಂತಪುರ-ದೇವನಹಳ್ಳಿ ಡೇಮು ರೈಲು ಸೇವೆಯನ್ನು ಚಿಕ್ಕಬಳ್ಳಾಪುರದವರೆಗೂ ವಿಸ್ತರಿಸಲಾಗಿದೆ. ಆ ರೈಲಿಗೆ ಸಚಿವರು ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಸಂಸದ ಕೆ.ಎಚ್.ಮುನಿಯಪ್ಪ, ರೈಲ್ವೆ ಇಲಾಖೆ ಜನರಲ್ ಮ್ಯಾನೇಜರ್ ಎ.ಕೆ.ಸಿಂಗ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.







