ಅಮೆರಿಕ: ರಾಷ್ಟ್ರೀಯ ತುರ್ತು ಪರಿಸ್ಥಿತಿ ಪ್ರಶ್ನಿಸಿ ಮೊಕದ್ದಮೆ
ವಾಶಿಂಗ್ಟನ್, ಫೆ. 17: ಮೆಕ್ಸಿಕೊ ಗಡಿಯುದ್ದಕ್ಕೂ ಗೋಡೆ ಕಟ್ಟುವ ತನ್ನ ಮಹತ್ವಾಕಾಂಕ್ಷೆಯ ಯೋಜನೆಗೆ ಹಣ ಹೊಂದಿಸುವುದಕ್ಕಾಗಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಅದನ್ನು ಪ್ರಶ್ನಿಸಿ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳು ದಾಖಲಾಗಿವೆ.
ಟ್ರಂಪ್ ಆದೇಶದ ಸಂವಿಧಾನಬದ್ಧತೆಯನ್ನು ಮೊಕದ್ದಮೆಗಳು ಪ್ರಶ್ನಿಸಿವೆ ಹಾಗೂ ತುರ್ತು ಪರಿಸ್ಥಿತಿಯು ಗಡಿಯಲ್ಲಿ ವಾಸಿಸುತ್ತಿರುವ ಜನರ ಮೇಲೆ ಬೀರಲಿರುವ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿವೆ.
ಮೊದಲ ಮೊಕದ್ದಮೆ ವಾಶಿಂಗ್ಟನ್ ಡಿಸಿಯ ನ್ಯಾಯಾಲಯವೊಂದರಲ್ಲಿ ದಾಖಲಾಗಿದ್ದು, ಸಂವಿಧಾನದ ಎರಡನೇ ಪರಿಚ್ಛೇದದಡಿ ಅಧ್ಯಕ್ಷರು ಹೊಂದಿರುವ ಅಧಿಕಾರ ವ್ಯಾಪ್ತಿಯನ್ನು ಟ್ರಂಪ್‌ರ ತುರ್ತು ಪರಿಸ್ಥಿತಿ ಆದೇಶ ಉಲ್ಲಂಘಿಸಿದೆ ಎಂಬುದಾಗಿ ಘೋಷಿಸುವಂತೆ ನ್ಯಾಯಾಲಯವನ್ನು ಕೋರಿದೆ. ಟ್ರಂಪ್ ಆದೇಶವು ಸಂಸದೀಯ ಪ್ರಾಧಿಕಾರದ ಉಲ್ಲಂಘನೆ ಹಾಗೂ ಅಸಿಂಧು ಎಂಬುದಾಗಿಯೂ ಘೋಷಿಸಬೇಕು ಎಂದು ಮೊಕದ್ದಮೆ ನ್ಯಾಯಾಲಯವನ್ನು ಕೋರಿದೆ.
ಗೋಡೆಯನ್ನು ಕಟ್ಟಲು ರಕ್ಷಣಾ ಇಲಾಖೆಯ ಬಜೆಟನ್ನು ಬಳಸದಂತೆ ಟ್ರಂಪ್ ಸರಕಾರಕ್ಕೆ ಸೂಚನೆ ನೀಡುವಂತೆಯೂ ಅದು ಕೋರಿದೆ.
ಲಾಭರಹಿತ ನೆರವು ಸಂಘಟನೆ ‘ಪಬ್ಲಿಕ್ ಸಿಟಿಝನ್’ ದಕ್ಷಿಣ ಟೆಕ್ಸಾಸ್‌ನಲ್ಲಿರುವ ಮೂವರು ಭೂಮಾಲೀಕರ ಪರವಾಗಿ ಈ ಮೊಕದ್ದಮೆಯನ್ನು ದಾಖಲಿಸಿದೆ. ಗೋಡೆ ಕಟ್ಟುವುದಕ್ಕಾಗಿ ಈ ಮೂವರ ಜಮೀನನ್ನು ವಶಪಡಿಸಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.