ಹೊರಗುತ್ತಿಗೆ ನೌಕರರಿಂದ ಕೋಟ್ಯಾಂತರ ರೂ. ವಸೂಲಿ ದಂಧೆ ?
ನೇಮಕ ಬಗ್ಗೆ ಚರ್ಚಿಸಿದರೆ ಕೆಲಸದಿಂದ ತೆಗೆದುಹಾಕುವ ಬೆದರಿಕೆ: ಆರೋಪ

ಮಂಗಳೂರು ನಗರದ ಮಿನಿವಿಧಾನಸೌಧದ ಬಳಿಯ ಎನ್ಜಿಒ ಸಭಾಂಗಣದಲ್ಲಿ ಹೊರಗುತ್ತಿಗೆ ನೌಕರರಿಂದ ದಾಖಲೆ-ಪತ್ರಗಳನ್ನು ಸ್ವೀಕರಿಸುತ್ತಿರುವ ಕೆಎಸ್ಎಫ್-9 ಕಾರ್ಪೊರೇಟ್ ಸರ್ವಿಸ್ ಏಜೆನ್ಸಿಯ ಸಿಬ್ಬಂದಿ.
ಮಂಗಳೂರು, ಫೆ.17: ಸರಕಾರಿ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳುತ್ತಿರುವ ಏಜೆನ್ಸಿಯೊಂದು ನೇಮಕಾತಿ ಹೆಸರಲ್ಲಿ ಮಂಗಳೂರಿನಲ್ಲಿ ಕೋಟ್ಯಂತರ ರೂ. ವಸೂಲಿ ಮಾಡುತ್ತಿರುವ ದಂಧೆ ಸದ್ದಿಲ್ಲದೆ ನಡೆಯುತ್ತಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ. ಹೊರಗುತ್ತಿಗೆಯನ್ನು ಸರಕಾರದಿಂದ ಈ ಹಿಂದೆ ಮಂಗಳೂರಿನ ‘ಸಮೃದ್ಧಿ ಫಡಿಲಿಟಿ ಸರ್ವಿಸ್’ ಹೆಸರಿನ ಏಜೆನ್ಸಿಗೆ ನೀಡಲಾಗಿತ್ತು. 2019ನೇ ಸಾಲಿನಲ್ಲಿ ಇದೇ ಗುತ್ತಿಗೆ ಟೆಂಡರ್ನ್ನು ‘ಕೆಎಸ್ಎಫ್-9 ಕಾರ್ಪೊರೇಟ್ ಸರ್ವೀಸ್’ ಹೆಸರಿನ ಏಜೆನ್ಸಿ ಹೊರಗುತ್ತಿಗೆ ಟೆಂಡರ್ನ್ನು ತೆಗೆದುಕೊಂಡಿದೆ. ಅಲ್ಲದೆ, ಇದೇ ಗುತ್ತಿಗೆ ಸಂಬಂಧ ಹೈಕೋರ್ಟ್ನಲ್ಲಿ ವಿಚಾರಣಾ ಅರ್ಜಿ ಬಾಕಿ ಇದ್ದು, ಫೆ.18ರಂದು ಇದು ವಿಚಾರಣೆಗೆ ಬರಲಿದೆ. ವಾಸ್ತವ ಹೀಗಿದ್ದರೂ ಹೊಸದಾಗಿ ಟೆಂಡರ್ ಪಡೆದವರು ದೂರವಾಣಿ ಮೂಲಕ ಹೊರಗುತ್ತಿಗೆ ನೌಕರರಿಗೆ ಕರೆ ಮಾಡಿ ನೋಂದಣಿ ಶುಲ್ಕವಾಗೊ 3,000ದಿಂದ 5,000 ರೂ.ವರೆಗೆ ಪಾವತಿಸುವಂತೆ ಸೂಚಿಸಿದ್ದು, ಹೊರಗುತ್ತಿಗೆ ನೌಕರರ ಸಂಕಷ್ಟ ಮತ್ತಷ್ಟು ಹೆಚ್ಚುವಂತಾಗಿದೆ.
‘ಏಜೆನ್ಸಿಗಳಿಂದ ನೌಕರರಿಗೆ ಸರಿಯಾದ ಸಂಬಳ ನೀಡದಿರುವುದು, ಕಡಿಮೆ ವೇತನ ನೀಡುವುದು ಸೇರಿದಂತೆ ವಿವಿಧ ರೀತಿಯ ಶೋಷಣೆಗಳನ್ನು ನೀಡಲಾಗುತ್ತಿತ್ತು. ಈ ಬಗ್ಗೆ ಹೋರಾಟ ಮುಂದುವರಿದಿದೆ. ಏತನ್ಮಧ್ಯೆ, ಹೊಸದಾಗಿ ಕೆಲಸಕ್ಕೆ ಸೇರುವವರಿಂದ ಏಜೆನ್ಸಿಯು ಮೊದಲೇ ಹಣವನ್ನು ವಸೂಲಿ ಮಾಡುತ್ತಿದ್ದು, ಇದು ಸಲ್ಲದು ಎಂದು ಸರಕಾರಿ ಗುತ್ತಿಗೆ ನೌಕರರ ಮಹಾ ಒಕ್ಕೂಟದ ಅಧ್ಯಕ್ಷ ವಾಸು ಎಚ್.ವಿ. ಅವರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
‘ಏಜೆನ್ಸಿಯಿಂದ ಹಣ ಪೀಕುವ ಪ್ರಮಾಣ ಆಯಾ ಕೆಲಸದ ಮೇಲೆ ನಿಗದಿಯಾಗಿದ್ದು, ಸುಮಾರು 5,000, 10,000, 20,000 ರೂ.ವರೆಗೆ ವಸೂಲಿ ಮಾಡಲಾಗುತ್ತಿದೆ. ಉದಾಹರಣೆಗೆ, ಆಸ್ಪತ್ರೆಗೆ ಕ್ಲೀನಿಂಗ್ ಕೆಲಸಕ್ಕೆ ಬರುವವರು 20,000 ರೂ.ನ್ನು ಆರಂಭದಲ್ಲೇ ನೀಡಬೇಕು. ಅಂತಹ ನೌಕರರಿಗೆ ಎಂಟು ಸಾವಿರ ವೇತನವಿದ್ದು, ಎರಡು ಮೂರು ತಿಂಗಳ ವೇತನವನ್ನು ಇವರಿಗೇ ಕೊಡಬೇಕಾದ ದುರಂತ ಎದುರಾಗಿದೆ’ ಎಂದು ಅವರು ಹೇಳಿದ್ದಾರೆ.
ಹೊಸದಾಗಿ ಟೆಂಡರ್ ಪಡೆದ ಏಜೆನ್ಸಿಯೊಂದು ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಈ ಏಜೆನ್ಸಿಯೊಂದೇ ರಾಜ್ಯದಲ್ಲಿ ಬಹುತೇಕ ಗುತ್ತಿಗೆಗಳನ್ನು ವಹಿಸಿಕೊಂಡಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿ ಹಾಗೂ ಕೋರ್ಟ್ ನಲ್ಲಿ ಕೆಲಸ ಮಾಡುವವರು ಇದರಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ’ ಎಂದು ಅವರು ತಿಳಿಸಿದರು.
ಕೆಸಿಎಫ್-9 ಕಾರ್ಪೊರೇಟ್ ಸರ್ವಿಸ್ ಏಜೆನ್ಸಿ ನೌಕರರೊಬ್ಬರಿಂದ ಹಣ ಪಡೆದು ರಶೀದಿ ನೀಡಿರುವುದು.
‘ದ.ಕ., ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುತ್ತಿಗೆ ನೌಕರರಿಂದ 5,000 ರೂ. ವಸೂಲಿ ಮಾಡುತ್ತಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ 10ರಿಂದ 15 ಸಾವಿರ ರೂ.ವರೆಗೆ ವಸೂಲಿ ಮಾಡಲಾಗುತ್ತಿದೆ. ಇನ್ನು ಕೆಲವು ಜಿಲ್ಲೆಗಳಲ್ಲಿ 1 ಸಾವಿರದಿಂದ 3 ಸಾವಿರದವರೆಗೆ ಹಣವನ್ನು ಪೀಕಿಸಲಾಗುತ್ತಿದೆ. ಈಗಾಗಲೇ ನಿಗದಿತ ಇಲಾಖೆಯಲ್ಲಿ ಕೆಲಸ ಮಾಡುವವರು 8ರಿಂದ 10 ವರ್ಷಗಳವರೆಗೆ ಕೆಲಸ ಮಾಡಿರುತ್ತಾರೆ. ಈ ಗುತ್ತಿಗೆದಾರರು ಹೊಸಬರಾಗಿದ್ದರೂ ಈ ರೀತಿಯಲ್ಲಿ ದಬ್ಬಾಳಿಕೆ ಮಾಡುತ್ತಿದ್ದಾರೆ’ ಎನ್ನುತ್ತಾರೆ ವಾಸು ಎಚ್.ವಿ. ಅವರು.
‘ಅಭಿಯೋಜನಾ ಇಲಾಖೆಯು ನೌಕರಿ ಆಕಾಂಕ್ಷಿಗಳಿಗೆ ಮೊದಲು ನೋಂದಣಿ ಮಾಡಲೆಂದು ಒಂದು ಲೆಟರ್ನ್ನು ಕಳುಹಿ ಸುತ್ತದೆ. ದ.ಕ., ಉಡುಪಿ, ಉ.ಕ. ಜಿಲ್ಲೆಗಳಿಂದ ಉದ್ಯೋಗಾಕಾಂಕ್ಷಿಗಳನ್ನು ಕರೆಸಿ, ‘ನಿಮ್ಮ ಮುಂದಿನ ಗುತ್ತಿಗೆದಾರರು ನಾವೇ’ ಎಂದು ಹೇಳಲು ಶನಿವಾರ ಮಂಗಳೂರಿನ ಮಿನಿವಿಧಾನಸೌಧ ಸಮೀಪದ ಎನ್ಜಿಒ ಹಾಲ್ನ ನೌಕರರ ಭವನದಲ್ಲಿ ಸಭೆ ಕರೆಯಲಾಗಿತ್ತು. ಸಭೆಗೆ ಸುಮಾರು 70ಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರು ಆಗಮಿಸಿದ್ದರು. ಮೂರು ಜಿಲ್ಲೆಗಳ ಗುತ್ತಿಗೆ ನೌಕರರಿಗೆ 5,000 ರೂ. ತರಲು ಸೂಚಿಸಲಾಗಿತ್ತು. ಈ ಬಗ್ಗೆ ಉಡುಪಿ ಜಿಲ್ಲೆಯ ಕೆಲವರು ಪೊಲೀಸ್ ಇಲಾಖೆಗೆ ದೂರು ನೀಡಿದ್ದರು’ ಎಂದು ವಾಸು ಎಚ್.ವಿ. ತಿಳಿಸಿದರು.
‘ಏಜೆನ್ಸಿಯವರು ಪ್ರತಿ ನೌಕರನಿಂದ 5,000 ರೂ.ನಂತೆ ಹಣವನ್ನು ವಸೂಲಿ ಮಾಡಿ ಕಳುಹಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಪಾಂಡೇಶ್ವರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಮಿಸಿದ್ದು, ‘ಹಣವನ್ನು ಯಾಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ಪ್ರಶ್ನಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಲು ಕೆಲ ನೌಕರರನ್ನೂ ಕರೆದೊಯ್ದಿದ್ದಾರೆ. ಈ ವೇಳೆ ಏಜೆನ್ಸಿಯವರು ‘ನಾವು ಅಧಿಕೃತವಾಗಿ ಹಣವನ್ನು ಸಂಗ್ರಹಿಸುತ್ತಿದ್ದೇವೆ’ ಎಂದು ಉತ್ತರಿಸಿದ್ದಾರೆ. ಆಗ ಪೊಲೀಸ್, ಅಧಿಕೃತವೆಂದಾದರೆ ರಶೀದಿ ನೀಡಬೇಕಾಗಿತ್ತು’ ಎಂದು ವಿಚಾರಿಸಿದ್ದಾರೆ. ಇನ್ನು ಮುಂದೆ ರಶೀದಿ ನೀಡುತ್ತೇವೆ’ ಎಂದು ಏಜೆನ್ಸಿಯವರು ಸಮಜಾಯಿಷಿಕೆ ನೀಡಿದರು.’
‘ಏಜೆನ್ಸಿಯವರು 5,000ದ ಬದಲಾಗಿ 3,000 ರೂ.ನ ಅಧಿಕೃತವಲ್ಲದ ಎನ್ನಲಾದ ರಶೀದಿಯನ್ನು ನೀಡಲು ಮುಂದಾಗಿದ್ದಾರೆ. ಈ ರಶೀದಿಯನ್ನು ಡಿಡಿಪಿ ಸೆಂಟರ್ನಲ್ಲಿ ಜೆರಾಕ್ಸ್ ಮಾಡಿಸಿ ತಂದಿರುವುದು ಗಮನಕ್ಕೆ ಬಂದಿದೆ ಎಂದು ಸರಕಾರಿ ಗುತ್ತಿಗೆ ನೌಕರರ ಮಹಾ ಒಕ್ಕೂಟದ ಅಧ್ಯಕ್ಷ ವಾಸು ಎಚ್.ವಿ. ಆರೋಪಿಸಿದರು.
ಸರಕಾರಿ ಇಲಾಖೆಗಳಲ್ಲಿ ಗುತ್ತಿಗೆ ನೌಕರರನ್ನು ನೇಮಕ ಮಾಡಿ ಅವರಿಂದ ಏಜೆನ್ಸಿಯವರು ಹಣ ಪಡೆಯುತ್ತಿದ್ದಾರೆ. ಅದರ ವಿರುದ್ಧ ಹೋರಾಟ ಮುಂದುವರಿದಿದ್ದು, ಈಗ ಹೊಸತಾಗಿ ಕೆಲಸಕ್ಕೆ ಸೇರಬೇಕಾದರೆ ಇಂತಿಷ್ಟು ಹಣವನ್ನು ಮೊದಲೇ ನೀಡಬೇಕಾಗಿರುವುದು ಕಷ್ಟಕರವಾಗಿದೆ.
ವಾಸು ಎಚ್.ವಿ., ಸರಕಾರಿ ಗುತ್ತಿಗೆ ನೌಕರರ ಮಹಾ ಒಕ್ಕೂಟದ ಅಧ್ಯಕ್ಷ
ಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳಲು 65 ಲಕ್ಷ ರೂ.ನ ಟೆಂಡರ್ನ್ನು ತೆಗೆದುಕೊಂಡಿದ್ದೇನೆ. ದಾಖಲಾತಿ, ರಿಜಿಸ್ಟ್ರೇಶನ್, ಇಎಸ್ಐ, ಪಿಎಫ್ಗಾಗಿ ಮೂರು ಸಾವಿರ ರೂ.ನ್ನು ಮೊದಲೇ ಸ್ವೀಕರಿಸಲಾಗುತ್ತಿದೆ. ಹೊರ ಗುತ್ತಿಗೆ ನೌಕರರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವುದು ದಾಖಲೆ ರಹಿತ ಆರೋಪ. ಮಂಗಳೂರೊಂದರಲ್ಲೇ ನಮ್ಮ ಏಜೆನ್ಸಿಯಿಂದ ನೇಮಕವಾದವರು 2,000ಕ್ಕೂ ಹೆಚ್ಚು ನೌಕರರಿದ್ದಾರೆ. ನಮ್ಮದು ಕಾನೂನುಬದ್ಧ ಏಜೆನ್ಸಿಯಾಗಿದೆ. ಇದರಲ್ಲಿ ಯಾವುದೇ ಮೋಸ, ವಂಚನೆಯಿಲ್ಲ.
ಶಿವಕುಮಾರ್, ಕೆಎಸ್ಎಫ್-9 ಕಾರ್ಪೊರೇಟ್ ಸರ್ವಿಸ್ನ ವ್ಯವಹಾರ ವ್ಯವಸ್ಥಾಪಕ
ಹೊಸದಾಗಿ ಟೆಂಡರ್ ಪಡೆದಿದ್ದೇವೆ ಎನ್ನಲಾದ ಏಜೆನ್ಸಿಯವರು ಮೊದಲೇ ಬರಹೇಳಿದಂತೆ ನೌಕರರ ಭವನದಲ್ಲಿ ಸುಮಾರು 70ಕ್ಕೂ ಹೆಚ್ಚು ಗುತ್ತಿಗೆ ನೌಕರರು ಸೇರಿದ್ದೆವು. ಫಾರಂನ್ನು ತುಂಬಲು ಏಜೆನ್ಸಿಯವರಿಗೆ 5,000 ರೂ. ನೀಡಿದೆವು. ಆದರೆ ಈ ವೇಳೆ ಏಜೆನ್ಸಿಯಿಂದ ಯಾವುದೇ ರಶೀದಿ ನೀಡದೇ ಕೇವಲ ಡೈರಿಯಲ್ಲಿ ಹೆಸರನ್ನು ಬರೆದುಕೊಳ್ಳಲಾಗುತ್ತಿತ್ತು. ಪೊಲೀಸರು ಬಂದು ಹೋದ ಮೇಲೆ ಪ್ರತಿಯೊಬ್ಬರಿಂದ 3,000 ರೂ. ಪಡೆದು ರಶೀದಿ ನೀಡಿದ್ದಾರೆ. ಈ ಬಗ್ಗೆ ಯಾವುದೇ ವಿಚಾರವನ್ನು ಕಚೇರಿಯ ಮೇಲಧಿಕಾರಿಯ ಮುಂದೆ ಚರ್ಚಿಬಾರದು. ತಿಳಿಸಿದ್ದೇ ಆದಲ್ಲಿ ಕೆಲಸದಿಂದ ತೆಗೆದುಹಾಕುವ ಬೆದರಿಕೆ ಹಾಕಿದ್ದಾರೆ.
ಹೆಸರನ್ನು ಹೇಳಲಿಚ್ಛಿಸದ ಗುತ್ತಿಗೆ ನೌಕರ







