ಮಂಗಳೂರಿನಲ್ಲಿ ಫಾರ್ಮಾ ಪಾರ್ಕ್ ಸ್ಥಾಪನೆ: ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು, ಫೆ.18: ಫಾರ್ಮಸ್ಯೂಟಿಕಲ್ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ನಾವು ವಿಶ್ವ ದರ್ಜೆಯ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸಿದ್ದೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಇಂಡಿಯಾ ಫಾರ್ಮಾ ಹಾಗೂ ಇಂಡಿಯಾ ಮೆಡಿಕಲ್ ಡಿವೈಸಸ್ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿಶ್ವ ದರ್ಜೆಯ ಮೂಲ ಸೌಕರ್ಯವನ್ನು ಅಭಿವೃದ್ಧಿ ಪಡಿಸುವ ಮೂಲಕ ರಾಜ್ಯದ ಹಾಸನ ಮತ್ತು ಯಾದಗಿರಿಯಲ್ಲಿ ವಿಶೇಷವಾಗಿ ಫಾರ್ಮಾ ಎಸ್‌ಇಝೆಡ್‌ಗಳಿಗೆ ಅನುಕೂಲಕರ ವಾತಾವರಣವನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ರಾಜ್ಯ ಸರಕಾರ ಬೆಂಗಳೂರಿನಲ್ಲಿ ಶೀಘ್ರದಲ್ಲೇ ಫಾರ್ಮಾ ಮತ್ತು ಮೆಡ್‌ಟೆಕ್ ಝೋನ್ ಅಭಿವೃದ್ಧಿಪಡಿಸಲಿದೆ. ಅಂತೆಯೇ ಮಂಗಳೂರಿನಲ್ಲಿ ಫಾರ್ಮಾ ಪಾರ್ಕ್ ಸ್ಥಾಪನೆ ಮಾಡಲಿದೆ. ಇದು ರಾಜ್ಯದಲ್ಲಿ ಅಗತ್ಯವಾಗಿದ್ದ ಉತ್ಪಾದನಾ ಕ್ಷೇತ್ರವನ್ನು ಬಲಪಡಿಸಲಿದೆ ಹಾಗೂ ಹೂಡಿಕೆದಾರರಿಗೂ ಸಾಕಷ್ಟು ಅವಕಾಶ ಕಲ್ಪಿಸಲಿದೆ ಎಂದು ಹೇಳಿದರು.
ಫಾರ್ಮಸ್ಯೂಟಿಕಲ್ ಕೈಗಾರಿಕೆಗಳು, ಹಣಕಾಸ ಸಂಸ್ಥೆಗಳು ಮತ್ತು ಖಾಸಗಿ ಹೂಡಿಕೆದಾರರನ್ನು ಒಳಗೊಂಡ ಫಾರ್ಮಾ ವೆಂಚರ್ ಕ್ಯಾಪಿಟಲ್ ಫಂಡ್ ಸ್ಥಾಪಿಸಿದೆ. ವೈದ್ಯಕೀಯ ಸಲಕರಣೆಗಳ ಉತ್ಪಾದನಾ ಉದ್ಯಮಕ್ಕೆ ಇನ್ನಷ್ಟು ಹೆಚ್ಚಿನ ಒತ್ತು ನೀಡುವ ದೃಷ್ಟಿಯಿಂದ ನಾವು ಹಲವಾರು ಕಾರ್ಯತಂತ್ರಗಳನ್ನು ಹಮ್ಮಿಕೊಂಡಿದ್ದು, ಇದನ್ನು 2014-2019ರ ಹೊಸ ಕೈಗಾರಿಕಾ ನೀತಿಯಲ್ಲಿ ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹೊಸ ವೈದ್ಯಕೀಯ ಸಲಕರಣೆಗಳ ಪಾರ್ಕ್ ಉತ್ತೇಜಿಸುವ ದೃಷ್ಟಿಯಿಂದ ವೈದ್ಯಕೀಯ ಸಲಕರಣೆಗಳ ವಲಯಕ್ಕೆ ವಿಶೇಷ ಉತ್ತೇಜನ ನೀಡಲಾಗುವುದು ಹಾಗೂ ಫಾರ್ಮಾ ಮತ್ತು ವೈದ್ಯಕೀಯ ಸಲಕರಣೆಗಳ ಯೋಜನೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಮತ್ತು ಉದ್ಯೋಗ ಸೃಷ್ಟಿಯನ್ನು ಕ್ಷಿಪ್ರಗೊಳಿಸುವ ಸಲುವಾಗಿ ವಿಷನ್ ಗ್ರೂಪ್ ರಚಿಸಲಾಗಿದೆ ಎಂದರು.
ಎಲ್ಲ ಸಮಾನ ಸೌಲಭ್ಯಗಳು, ಕ್ಯಾಲಿಬ್ರೇಷನ್, ಪರೀಕ್ಷೆ, ಗುಣಮಟ್ಟ ನಿಯಂತ್ರಣ, ತ್ಯಾಜ್ಯ ನಿರ್ವಹಣೆ ಸೌಲಭ್ಯ ಸೇರಿದಂತೆ ಸಮಗ್ರ ಮೂಲ ಸೌಕರ್ಯ ವ್ಯವಸ್ಥೆಗಳನ್ನು ಒಳಗೊಂಡ ವೈದ್ಯಕೀಯ ಸಾಧನಗಳ ಪಾರ್ಕ್ ಆರಂಭಿಸುವ ಬಗ್ಗೆಯೂ ಸರಕಾರ ಚಿಂತನೆ ನಡೆಸಿದೆ ಎಂದು ಸಚಿವರು ಹೇಳಿದರು.







