ಕುಲಭೂಷಣ್ ಜಾಧವ್ ಪ್ರಕರಣ: ಪಾಕ್ ನಡೆಸಿದ್ದು ವಿಚಾರಣೆಯಲ್ಲ, ಪ್ರಹಸನ
ಅಂತರ್‌ರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ವಾದ
ಹೇಗ್ (ನೆದರ್‌ಲ್ಯಾಂಡ್ಸ್), ಫೆ. 18: ಭಾರತ ರಾಷ್ಟ್ರೀಯ ಕುಲಭೂಷಣ್ ಜಾಧವ್ ಗೆ ಪಾಕಿಸ್ತಾನದ ಸೇನಾ ನ್ಯಾಯಾಲಯವೊಂದು ವಿಚಾರಣೆಯೆಂಬ ಪ್ರಹಸನ ನಡೆಸಿ ಮರಣದಂಡನೆ ವಿಧಿಸಿದೆ ಎಂದು ಭಾರತ ಸೋಮವಾರ ಹೇಳಿದೆ.
ವಿಚಾರಣೆಯ ವೇಳೆ, ಭಾರತೀಯ ಕೌನ್ಸುಲರ್ ಸಂಪರ್ಕವನ್ನು ಅವರಿಗೆ ನಿರಾಕರಿಸಲಾಗಿದೆ ಹಾಗೂ ಇದು ಅಂತರ್‌ರಾಷ್ಟ್ರೀಯ ಕಾನೂನು ಮತ್ತು ಸಂಪ್ರದಾಯದ ಉಲ್ಲಂಘನೆಯಾಗಿದೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತವನ್ನು ಪ್ರತಿನಿಧಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ ಹೇಳಿದರು.
ನ್ಯಾಯಾಲಯವು ಸೋಮವಾರದಿಂದ ನಾಲ್ಕು ದಿನಗಳ ಕಾಲ ಪ್ರಕರಣದ ವಿಚಾರಣೆ ನಡೆಸಲಿದೆ.
ಭಾರತದ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಪಾಕಿಸ್ತಾನದಲ್ಲಿ ಬೇಹುಗಾರಿಕೆ ಹಾಗೂ ಭಯೋತ್ಪಾದನೆ ನಡೆಸಿದ್ದಾರೆ ಎಂಬುದಾಗಿ ಆರೋಪಿಸಿರುವ ಪಾಕಿಸ್ತಾನ ಅವರಿಗೆ ಮರಣದಂಡನೆ ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ.
ಪಾಕಿಸ್ತಾನ ಸೇನಾ ನ್ಯಾಯಾಲಯದ ಈ ತೀರ್ಪನ್ನು ಭಾರತವು ಅಂತರ್‌ರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಿದೆ. 2017 ಮೇ ತಿಂಗಳಲ್ಲಿ ಸರ್ವಾನುಮತದ ಆದೇಶವೊಂದನ್ನು ನೀಡಿದ ನ್ಯಾಯಾಲಯವು, ಜಾಧವ್ ರ ಶಿಕ್ಷೆಯ ಜಾರಿಗೆ ತಡೆಯಾಜ್ಞೆ ವಿಧಿಸಿತ್ತು.
ಪ್ರಕರಣದಲ್ಲಿ ಪಾಕಿಸ್ತಾನವು ಯಾವುದೇ ಪ್ರಬಲ ಸಮರ್ಥನೆ ಹೊಂದಿಲ್ಲ ಹಾಗೂ ಜಾಧವ್‌ರ ಶಿಕ್ಷೆಗೆ ಕಾರಣವಾಗಿದೆಯೆನ್ನಲಾದ ಅಪರಾಧಗಳ ಪ್ರಾಥಮಿಕ ವಿವರಗಳನ್ನೂ ಬಹಿರಂಗಪಡಿಸಿಲ್ಲ ಎಂದು ಸಾಳ್ವೆ ಹೇಳಿದರು.
ಜಾಧವ್‌ಗೆ ರಾಜತಾಂತ್ರಿಕ ಸಂಪರ್ಕವನ್ನು ಒದಗಿಸುವಂತೆ ಕೋರಿ ಭಾರತವು ಪಾಕಿಸ್ತಾನಕ್ಕೆ 13 ಮನವಿಗಳನ್ನು ಸಲ್ಲಿಸಿತ್ತಾದರೂ, ಪಾಕಿಸ್ತಾನದಿಂದ ಧನಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ನುಡಿದರು.
‘‘ಕಳೆದ ಮೂರು ವರ್ಷಗಳ ಅವಧಿಯಲ್ಲಿ ಜಾಧವ್ ಅನುಭವಿಸಿದ ಮಾನಸಿಕ ಸಂಕಟವನ್ನು ಗಣನೆಗೆ ತೆಗೆದುಕೊಂಡು ಅವರ ಬಿಡುಗಡೆ ಆದೇಶ ನೀಡಿದರೆ ನ್ಯಾಯದ ಹಿತದೃಷ್ಟಿಯಿಂದ ಒಳ್ಳೆಯದು’’ ಎಂದು 15 ನ್ಯಾಯಾಧೀಶರ ಪೀಠದ ಮುಂದೆ ಅವರು ವಾದಿಸಿದರು.
ಪಾಕ್ ಅಟಾರ್ನಿಯ ಕೈ ಕುಲುಕದೆ ‘ನಮಸ್ಕಾರ’ ಎಂದ ಭಾರತೀಯ ಅಧಿಕಾರಿ
ಕನಿಷ್ಠ 44 ಸಿಆರ್‌ಪಿಎಫ್ ಯೋಧರ ಸಾವಿಗೆ ಕಾರಣವಾದ ಪುಲ್ವಾಮ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಉಂಟಾಗಿರುವ ಉದ್ವಿಗ್ನತೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲೂ ಪ್ರತಿಧ್ವನಿಸಿತು.
ಭಾರತೀಯ ವಿದೇಶ ಕಾರ್ಯದರ್ಶಿ ದೀಪಕ್ ಮಿತ್ತಲ್ ಸೇರಿದಂತೆ ಭಾರತೀಯ ರಾಜತಾಂತ್ರಿಕರು ಪಾಕಿಸ್ತಾನದ ಅಟಾರ್ನಿ ಜನರಲ್ ಅನ್ವರ್ ಮನ್ಸೂರ್ ಖಾನ್‌ರನ್ನು ನ್ಯಾಯಾಲಯದಲ್ಲಿ ವಿಚಾರಣೆ ಆರಂಭಗೊಳ್ಳುವ ಮೊದಲು ಭೇಟಿಯಾದಾಗ ಇದು ಎಲ್ಲರ ಗಮನಕ್ಕೆ ಬಂತು.
ಕೈ ಕುಲುಕುವುದಕ್ಕಾಗಿ ಅನ್ವರ್ ಮನ್ಸೂರ್ ಖಾನ್ ಕೈ ಚಾಚಿದಾಗ ದೀಪಕ್ ಮಿತ್ತಲ್ ಅದನ್ನು ತಿರಸ್ಕರಿಸಿ, ಕೈಜೋಡಿಸಿ ‘ನಮಸ್ಕಾರ’ ಮಾಡಿದರು. ಆ ಮೂಲಕ, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಅಮಾನತಿನಲ್ಲಿದೆ ಎಂಬ ಸೂಚನೆಯನ್ನು ನೀಡಿದರು.