ಹೆಚ್ಚು ಅಂತರ್‌ರಾಷ್ಟ್ರೀಯ ಟೂರ್ನಿ ಆಡಲು ಹಣಕಾಸು ನೆರವು ಬೇಕು: ಸೌರಭ್ ವರ್ಮಾ

ಹೊಸದಿಲ್ಲಿ, ಫೆ.18: ಹಣಕಾಸು ನೆರವು ನೀಡುವಂತೆ ಕೇಳಿಕೊಂಡಿರುವ ಹಾಲಿ ರಾಷ್ಟ್ರೀಯ ಚಾಂಪಿಯನ್ ಸೌರಭ್ ವರ್ಮಾ ಇದರಿಂದ ನನಗೆ ಹೆಚ್ಚು ಟೂರ್ನಮೆಂಟ್‌ಗಳಲ್ಲಿ ಆಡಿ ವಿಶ್ವ ರ್ಯಾಂಕಿಂಗ್‌ನಲ್ಲಿ ಮೇಲಕ್ಕೇರಲು ನೆರವಾಗುತ್ತದೆ ಎಂದಿದ್ದಾರೆ.
2011ರಲ್ಲಿ ಹಿರಿಯರ ರಾಷ್ಟ್ರೀಯ ಪ್ರಶಸ್ತಿಯನ್ನು ಜಯಿಸುವ ಮೂಲಕ ಬೆಳಕಿಗೆ ಬಂದಿದ್ದ 26ರ ಹರೆಯದ ಸೌರಭ್ ಅವರು ನಿರಂತರ ತರಬೇತಿ ವೇಳೆ ಪದೇ ಪದೇ ಗಾಯಗೊಂಡ ಕಾರಣ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಇದು ಅವರ ರ್ಯಾಂಕಿಂಗ್‌ನ ಮೇಲೆ ಪರಿಣಾಮ ಬೀರಿತ್ತು. 2012ರಲ್ಲಿ ಜೀವನಶ್ರೇಷ್ಠ 30ನೇ ರ್ಯಾಂಕಿನಲ್ಲಿದ್ದ ಸೌರಭ್ ಈಗ 55ನೇ ರ್ಯಾಂಕಿಗೆ ಕುಸಿದಿದ್ದಾರೆ.
‘‘ನನಗೆ ಅಂತರ್‌ರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ ಆಡಲು ಆರ್ಥಿಕ ಬೆಂಬಲ ಸಿಗುತ್ತಿಲ್ಲ. ಇದೀಗ ಹೊಸ ನಿಯಮದಿಂದಾಗಿ ಅಗ್ರ-25 ರ್ಯಾಂಕಿನ ಆಟಗಾರರಿಗೆ ಮಾತ್ರ ದೇಶದ ಬ್ಯಾಡ್ಮಿಂಟನ್ ಸಂಸ್ಥೆಯ ಹಣಕಾಸು ನೆರವು ಸಿಗುತ್ತದೆ. ಬಿಎಐ ನನಗೆ ಡಚ್ ಓಪನ್‌ಗೆ ಪ್ರಾಯೋಜಕತ್ವ ನೀಡಿತ್ತು. ನನಗೆ ಇನ್ನಷ್ಟು ಹಣಕಾಸಿನ ಅಗತ್ಯವಿದೆ. ಹೆಚ್ಚು ರ್ಯಾಂಕಿಂಗ್ ಪಾಯಿಂಟ್ಸ್ ಪಡೆಯಲು ಕನಿಷ್ಠ 10-12 ಟೂರ್ನಿಗಳಲ್ಲಿ ಆಡುವ ಅಗತ್ಯವಿದೆ. ನನಗೆ ಕಳೆದ ವರ್ಷ ಮಂಡಿನೋವು ಕಾಡಿತ್ತು. ಆ ನೋವಿಗೆ ಸ್ವತಃ ಕಾಳಜಿ ವಹಿಸಿದ್ದೆ. ಟೂರ್ನಮೆಂಟ್‌ನ್ನು ಸ್ವಂತ ಖರ್ಚಿನಲ್ಲಿ ಆಡುತ್ತಿದ್ದೇನೆ. ಇದರಿಂದ ನನಗೆ ದೊಡ್ಡ ಭಾರ ಬಿದ್ದಿದೆ. ಮುಂಬರುವ ಸ್ವಿಸ್ ಓಪನ್ ಹಾಗೂ ಒರ್ಲಿಯನ್ಸ್ ಓಪನ್‌ನ ಪ್ರಯಾಣ, ಹೊಟೇಲ್ ವ್ಯವಸ್ಥೆ, ವೀಸಾದ ಖರ್ಚು-ವೆಚ್ಚವನ್ನು ನಾನೇ ಭರಿಸಬೇಕಾಗಿದೆ. ದೊಡ್ಡ ಟೂರ್ನಿಗಳಲ್ಲಿ ಆಡಲು ಹೆಚ್ಚು ಆಯ್ಕೆಯಿಲ್ಲ’’ ಎಂದು ಸೌರಭ್ ಹೇಳಿದ್ದಾರೆ.
ಕಳೆದ ವರ್ಷ ಭುಜನೋವಿನಿಂದ ಚೇತರಿಸಿಕೊಂಡಿರುವ ಸೌರಭ್ ರಶ್ಯ ಓಪನ್ ಹಾಗೂ ಡಚ್ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ಕಳೆದ ವಾರ ಗುವಾಹಟಿಯಲ್ಲಿ ಮೂರನೇ ಬಾರಿ ಹಿರಿಯರ ರಾಷ್ಟ್ರೀಯ ಬ್ಯಾಡ್ಮಿಂಟನ್ ಪ್ರಶಸ್ತಿ ಜಯಿಸಿದ್ದರು. ಮಧ್ಯಪ್ರದೇಶದ ಆಟಗಾರ ಸೌರಭ್ 2013ರಲ್ಲಿ ಬಹರೈನ್ ಇಂಟರ್‌ನ್ಯಾಶನಲ್ ಚಾಲೆಂಜ್‌ನಲ್ಲಿ ಚೊಚ್ಚಲ ಅಂತರ್‌ರಾಷ್ಟ್ರೀಯ ಪ್ರಶಸ್ತಿ ಜಯಿಸಿದ್ದರು.







