ಟೆನಿಸ್ ಬೆಳವಣಿಗೆಗೆ ಪೇಸ್, ಭೂಪತಿ, ಸಾನಿಯಾ ಒಗ್ಗಟ್ಟು ಪ್ರದರ್ಶಿಸಬೇಕು: ಬೆಕರ್

ಮೊನಾಕೊ, ಫೆ.18: ‘‘ಭಾರತೀಯ ಟೆನಿಸ್‌ನ ಮೂರು ಐಕಾನ್‌ಗಳಾದ ಲಿಯಾಂಡರ್ ಪೇಸ್, ಮಹೇಶ್ ಭೂಪತಿ ಹಾಗೂ ಸಾನಿಯಾ ಮಿರ್ಝಾ ತಮ್ಮ ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ದೇಶದ ಕ್ರೀಡಾಭಿವೃದ್ಧಿಗಾಗಿ ಒಗ್ಗಟ್ಟು ಪ್ರದರ್ಶಿಸುವ ಅಗತ್ಯವಿದೆ’’ ಎಂದು ಜರ್ಮನಿಯ ಲೆಜೆಂಡ್ ಆಟಗಾರ ಬೊರಿಸ್ ಬೆಕರ್ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಟೆನಿಸ್ ಕುರಿತು ಮಾತನಾಡಿದ ಬೆಕರ್, ‘‘ಕಳೆದ 3 ದಶಕಗಳಿಂದ ಭಾರತ ವಿಶ್ವ ದರ್ಜೆಯ ಸಿಂಗಲ್ಸ್ ಆಟಗಾರರನ್ನು ರೂಪಿಸಲು ಶಕ್ತವಾಗಿಲ್ಲ. ಡಬಲ್ಸ್ ಸ್ಪೆಷಲಿಸ್ಟ್‌ಗಳಾದ ಪೇಸ್, ಭೂಪತಿ ಹಾಗೂ ಸಾನಿಯಾ ಒಗ್ಗಟ್ಟಾಗಿ ದೇಶದಲ್ಲಿ ಟೆನಿಸ್‌ನ್ನು ಮುಂದಕ್ಕೆ ಒಯ್ಯಬೇಕು. ಭಾರತ ಟೆನಿಸ್‌ನಲ್ಲಿ ಸುದೀರ್ಘ ಗೆಲುವಿನ ಇತಿಹಾಸ ಹೊಂದಿದೆ. ಆಟಗಾರರ ದೊಡ್ಡ ಬಳಗವೇ ಇದೆ. ಕೆಲವರು ಪ್ರಶಸ್ತಿಯನ್ನು ಜಯಿಸಿದ್ದಾರೆ’’ ಎಂದು ಪಿಟಿಐಗೆ ಬೆಕರ್ ತಿಳಿಸಿದರು. ‘‘ಭಾರತದಲ್ಲಿ ಟೆನಿಸ್ ತುಂಬಾ ಜನಪ್ರಿಯ ಎಂಬ ವಿಚಾರ ನನಗೆ ಗೊತ್ತಿದೆ. ಸಾನಿಯಾ, ಭೂಪತಿ ಹಾಗೂ ಪೇಸ್ ಟೆನಿಸ್‌ಗಾಗಿ ಏನಾದರೂ ಮಾಡಬೇಕಾದ ಅಗತ್ಯವಿದೆ. ಅವರು ಸ್ವಲ್ಪ ಮಟ್ಟಿನ ಹೋರಾಟ ಮಾಡಿದ್ದಾರೆಂದು ಗೊತ್ತಿದೆ. ಒಟ್ಟಾಗಿ ಕಾರ್ಯೋನ್ಮುಖವಾದರೆ ಎಲ್ಲ ಸಮಸ್ಯೆ ಪರಿಹಾರವಾಗಲಿದೆ. ಜರ್ಮನಿ, ಫ್ರಾನ್ಸ್‌ನಲ್ಲಿ ಮಾಜಿ ಆಟಗಾರರು ಏಕತೆ ಪ್ರದರ್ಶಿಸಿದ್ದರು. ಕ್ರೀಡಾ ಆಡಳಿತದ ಬೆನ್ನಿಗೆ ನಿಂತಿದ್ದರು’’ ಎಂದು ಬೆಕರ್ ತಿಳಿಸಿದರು.





