ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡಲು ಧನಂಜಯಗೆ ಅನುಮತಿ

ಹೊಸದಿಲ್ಲಿ, ಫೆ.18: ಶಂಕಾಸ್ಪದ ಬೌಲಿಂಗ್ ಶೈಲಿಗೆ ಪರಿಹಾರಾತ್ಮಕ ಕ್ರಮ ಕೈಗೊಂಡು ಶೈಲಿಯನ್ನು ಸುಧಾರಿಸಿಕೊಂಡ ಬಳಿಕ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡಲು ಶ್ರೀಲಂಕಾ ಸ್ಪಿನ್ನರ್ ಅಖಿಲ ಧನಂಜಯಗೆ ಐಸಿಸಿ ಸೋಮವಾರ ಒಪ್ಪಿಗೆ ನೀಡಿದೆ.
ಧನಂಜಯ ಅವರ ಮರುರೂಪಿತ ಬೌಲಿಂಗ್ ಪ್ರಕ್ರಿಯೆಯನ್ನು ಫೆ.2ರಂದು ಚೆನ್ನೈನಲ್ಲಿ ವೌಲ್ಯಮಾಪನಕ್ಕೆ ಒಳಪಡಿಸಲಾಗಿತ್ತು. ವೌಲ್ಯಮಾಪನದಲ್ಲಿ ಐಸಿಸಿ ನಿಯಮಗಳ ಪ್ರಕಾರ ಅವರು ಬೌಲಿಂಗ್ ಮಾಡಿದ್ದು ಕಂಡುಬಂದಿತ್ತು.
ಒಂದು ವೇಳೆ ಧನಂಜಯ ಶಂಕಾಸ್ಪದ ಬೌಲಿಂಗ್ ಶೈಲಿಯನ್ನು ಮುಂದುವರಿಸಿದರೆ ವರದಿ ಮಾಡಿಕೊಳ್ಳುವ ಸ್ವಾತಂತ್ರವನ್ನು ಪಂದ್ಯದ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಐಸಿಸಿ ಪತ್ರಿಕಾ ಪ್ರಕಟನೆ ತಿಳಿಸಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಗಾಲೆಯಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಧನಂಜಯ ಶಂಕಾಸ್ಪದ ಬೌಲಿಂಗ್ ಮಾಡಿದ್ದಾರೆಂದು ಪಂದ್ಯದ ಅಧಿಕಾರಿಗಳು ವರದಿ ಮಾಡಿದ್ದರು. ಆ ಬಳಿಕ ಅವರಿಗೆ ತಮ್ಮ ಬೌಲಿಂಗ್ ಶೈಲಿಯನ್ನು ಸ್ವತಂತ್ರ ವೌಲ್ಯಮಾಪನಕ್ಕೆ ಒಳಪಡಿಸಿಕೊಳ್ಳಬೇಕೆಂದು ಐಸಿಸಿ ಹೇಳಿತ್ತು. ಆ ಬಳಿಕ ಅವರನ್ನು ಬೌಲಿಂಗ್‌ನಿಂದ ಅಮಾನತು ಮಾಡಲಾಗಿತ್ತು.





