ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕುರಿತ ಪ್ರಶ್ನೆಗೆ ಗರಂ ಆದ ಸಿಎಂ ಹೇಳಿದ್ದೇನು ?
ಲೋಕಸಭಾ ಚುನಾವಣೆ

ಮೈಸೂರು,ಫೆ.19: ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗರಂ ಆದ ಘಟನೆ ನಡೆಯಿತು.
ನಗರದ ದೇವರಾಜ ಮಾರುಕಟ್ಟೆ ವೀಕ್ಷಣೆ ಮಾಡಿದ ಬಳಿಕ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಏಳು ಸ್ಥಾನ ಬಿಟ್ಟುಕೊಡುವ ಮಾತುಗಳು ಕಾಂಗ್ರೆಸ್ ಪಕ್ಷದಲ್ಲಿ ಕೇಳಿ ಬಂದಿದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಸಿಟ್ಟಾದ ಸಿಎಂ, ವಿ ಆರ್ ನಾಟ್ ಬೆಗ್ಗರ್ಸ್. ನಾವು ಬಿಕ್ಷುಕರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನವರು ಏಳೋ, ಮೂರೊ, ಐದೋ ಎಷ್ಟು ಸ್ಥಾನ ಬಿಟ್ಟುಕೊಡುತ್ತಾರೆಂಬುವುದು ನನಗೆ ಗೊತ್ತಿಲ್ಲ. ರಾಷ್ಟ್ರ ರಾಜಕಾರಣದಲ್ಲಿ ಸ್ಪಷ್ಟ ಸಂದೇಶ ಕೊಡುವ ದೃಷ್ಟಿಯಿಂದ ಇಬ್ಬರೂ ಒಟ್ಟಿಗೆ ಕುಳಿತು ತೀರ್ಮಾನ ಮಾಡಬೇಕಿದೆ. ಮೈತ್ರಿ ಸರ್ಕಾರದಲ್ಲಿ ರಾಜ್ಯದ ಜನತೆಗೆ ಒಳ್ಳೆಯ ಆಡಳಿತ ನೀಡುವುದು ನನ್ನ ಜವಾಬ್ದಾರಿ. ಆ ಹಿನ್ನೆಲೆಯಲ್ಲಿ ನಾನು ನಡೆಯುತ್ತಿದ್ದೇನೆ. ಮೈತ್ರಿ ವಿಚಾರ ನನಗೆ ಗೊತ್ತಿಲ್ಲ ಎಂದರು.
ಲೋಕಸಭಾ ಚುನಾವಣೆಯಲ್ಲಿನ ಸೀಟು ಹಂಚಿಕೆ ಸಂಬಂಧ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಮತ್ತು ಕಾಂಗ್ರೆಸ್ ನಾಯಕರು ಏನು ತೀರ್ಮಾನ ಮಾಡುತ್ತಾರೋ ಕಾದು ನೋಡೋಣ. ಆ ಕುರಿತು ನನಗೇನು ಗೊತ್ತಿಲ್ಲ. ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ನನ್ನ ಬಳಿ ಮಾತನಾಡಿಲ್ಲ ಎಂದು ತಿಳಿಸಿದರು.







