ಆಸ್ತಿ ವಿವಾದ: ತಮ್ಮನನ್ನೇ ಕಲ್ಲು ಎತ್ತಿಹಾಕಿ ಕೊಲೆಗೈದ ಅಣ್ಣ

ಮುದ್ದೇಬಿಹಾಳ,ಫೆ,19: ತಾಲೂಕಿನ ರೂಢಗಿ ಗ್ರಾಮದಲ್ಲಿ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಅಣ್ಣನೊಬ್ಬ ತನ್ನ ಸ್ವಂತ ತಮ್ಮನನ್ನೇ ಕೊಲೆ ಮಾಡಿದ ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದ್ದು, ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಶ್ರೀಕಾಂತ ಬಸಪ್ಪ ಈಳಗೇರ (35) ಕೊಲೆಯಾದ ವ್ಯಕ್ತಿ. ಲಕ್ಷ್ಮಣ ಬಸಪ್ಪ ಈಳಗೇರ ಕೊಲೆ ಆರೋಪಿಯಾಗಿದ್ದಾನೆ. ಈ ಕುರಿತು ಶ್ರೀಕಾಂತನ ತಾಯಿ ಬಾಳವ್ವ ಬಸಪ್ಪ ಈಳಗೇರ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೊಲೆ ಮಾಡಿದ ನಂತರ ಆರೋಪಿ ತಾನೇ ಪೊಲೀಸ್ ಠಾಣೆಗೆ ಧಾವಿಸಿ ಶರಣಾಗಿದ್ದು, ಸಿಪಿಐ ರವಿಕುಮಾರ ಮಾರ್ಗದರ್ಶನದಲ್ಲಿ ಮುದ್ದೇಬಿಹಾಳ ಠಾಣೆ ಪಿಎಸೈ ಮಲ್ಲಪ್ಪ ಮಡ್ಡಿ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.
ಆಸ್ತಿ ವಿಷಯದಲ್ಲಿ ಶ್ರೀಕಾಂತ ಆಗಾಗ ಅಣ್ಣ ಲಕ್ಷ್ಮಣನನ್ನು ಕೊಲೆ ಮಾಡುವ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದ್ದು, ಅಪರಾಧದ ಹಿನ್ನೆಲೆ ಹೊಂದಿದ್ದ ಶ್ರೀಕಾಂತ ಹೇಳಿದಂತೆ ಮಾಡುತ್ತಾನೆ ಎಂದು ಅರಿತಿದ್ದ ಲಕ್ಷ್ಮಣ ತನ್ನ ಪ್ರಾಣ ಉಳಿಸಿಕೊಳ್ಳಲು ತಮ್ಮನನ್ನೇ ಕೊಲೆ ಮಾಡುವ ತೀರ್ಮಾನಕ್ಕೆ ಬಂದಿದ್ದಾನೆ. ಅದರಂತೆ ಸೋಮವಾರ ಮಧ್ಯರಾತ್ರಿ ಮದ್ಯಸೇವಿಸಿ ಮನೆಯಲ್ಲಿ ಮಲಗಿದ್ದ ಶ್ರೀಕಾಂತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಈ ಕೃತ್ಯ ಎಸಗಿದ್ದಾನೆ. ತೀವ್ರ ಗಾಯದಿಂದ ಒದ್ದಾಡುತ್ತಿದ್ದ ಶ್ರೀಕಾಂತನನ್ನು ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.







