ಬಗರ್ ಹುಕುಂ ಸಾಗುವಳಿ ಸಕ್ರಮಕ್ಕೆ ಆಗ್ರಹಿಸಿ ರೈತರ ಧರಣಿ

ಬೆಂಗಳೂರು, ಫೆ.19: ಬಗರ್ ಹುಕುಂ ಸಾಗುವಳಿ ಸಕ್ರಮ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೃಷಿ ಕೂಲಿಕಾರ್ಮಿಕರು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಮುಂಖಡರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಂಗಳವಾರ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ ಉದ್ಯಾನದವರೆಗೆ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ನಡೆಸಿದ ಕೂಲಿಕಾರರು, ತಮ್ಮ ಬೇಡಿಕೆ ಈಡೇರಿಸುವಂತೆ, ಮುಖ್ಯಮಂತ್ರಿಯವರ ಗೃಹ ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಜಿ.ಸಿ.ಬಯ್ಯಿರೆಡ್ಡಿ ಮಾತನಾಡಿ, ಕೃಷಿ ಕಾರ್ಮಿಕರು 15 ವರ್ಷಗಳಿಂದ ನಡೆಸಿದ ಹೋರಾಟದಿಂದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಮುತುವರ್ಜಿಯಿಂದ ಗೋಮಾಳ ಭೂಮಿಯನ್ನು ಉಳುಮೆ ಮಾಡುತ್ತಿದ್ದ ಬಗರ್ ಹುಕುಂ ಸಾಗುವಳಿ ರೈತರಿಗೆ ಸಕ್ರಮ ಮಾಡಲು ಅಗತ್ಯವಿದ್ದ ಕಂದಾಯ ಕಾನೂನುಗೆ ತಿದ್ದಪಡಿ ಹಾಗೂ ವಿಶೇಷವಾಗಿ ಬಗರ್‌ಹುಕುಂ ಸಾಗುವಳಿಯ ಸಕ್ರಮಕ್ಕಾಗಿ ಹೊಸದಾಗಿ ಅರ್ಜಿ ಹಾಕಿಕೊಳ್ಳಲು ಅವಕಾಶ ನೀಡುವ ಮತ್ತೊಂದು ತಿದ್ದುಪಡಿಯನ್ನು ಹಿಂದಿನ ಸರಕಾರ ಮಾಡಿತು. ಆದರೆ, ಅದು ಇಲ್ಲಿಯತನಕ ಅನುಷ್ಠಾನವಾಗದೆ ರೈತರು ಸಮಸ್ಯೆಗೆ ಸಿಲುಕುವಂತಾಗಿದೆ ಎಂದು ತಿಳಿಸಿದರು.
ರಾಜ್ಯ ಸರಕಾರದ ತೀರ್ಮಾನದ ಭಾಗವಾಗಿ ಫಾರಂ ನಂ.57ನ್ನು ಬಿಡುಗಡೆ ಮಾಡಿ ಮಾ.16, 2019ರೊಳಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಫಾರಂ ನಂ.57ನ್ನು ವಿತರಣೆ ಮಾಡುವ ಹಾಗೂ ಸ್ವೀಕರಿಸುವ ಸಂಬಂಧಪಟ್ಟ ಅನೇಕ ಗೊಂದಲಗಳು ಉಂಟಾಗಿವೆ. ಕೋಲಾರ ಜಿಲ್ಲೆಗಳಲ್ಲಿ ಈ ತನಕ ಅರ್ಜಿಗಳನ್ನೇ ಸ್ವೀಕರಿಸುತ್ತಿಲ್ಲ. ತುಮಕೂರು ಜಿಲ್ಲೆಯ ಗುಬ್ಬಿ, ಶಿರಾ ಸೇರಿದಂತೆ ವಿವಿಧ ತಾಲೂಕು ಆಫೀಸ್‌ನಲ್ಲಿ ದಿನಕ್ಕೆ ಕಚೇರಿ ಸೀಲ್‌ನೊಂದಿಗೆ ನಿಗದಿತ ಸಂಖ್ಯೆಯಲ್ಲಿ ವಿತರಿಸಲಾಗುತ್ತಿರುವ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆ ಒಳಗೊಂಡು ಹಲವಾರು ಜಿಲ್ಲೆಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗಡಿಯಿಂದ 18 ಕಿ.ಮೀ. ಬೇರೆ ಮಹಾನಗರ ಪಾಲಿಕೆಗಳ ಗಡಿಗಳಿಂದ 10 ಕಿ.ಮೀ. ನಗರ ಸಭೆಯ ಗಡಿಗಳಿಂದ 5 ಕಿ.ಮೀ ಹಾಗೂ ಪುರಸಭೆ ಗಡಿಗಳಿಂದ 3 ಕಿ.ಮೀ ವ್ಯಾಪ್ತಿಯೊಳಗೆ ನಿಮ್ಮ ಭೂಮಿ ಬರುವುದರಿಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲವೆಂದು ತಾಲೂಕು ಮಟ್ಟದಲ್ಲಿ ಹೇಳುತ್ತಿದ್ದಾರೆ. ಆದರೆ, ಅಂತಹ ಯಾವುದೇ ಸೂಚನೆ ಅಥವಾ ಸುತ್ತೋಲೆಗಳನ್ನು ತಾವು ಕಳುಹಿಸಿಲ್ಲವೆಂದು ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಜೀವನ ಸಾಗಿಸುವುದೇ ಕಷ್ಟವಾಗಿರುವ ಈ ಸಂದರ್ಭದಲ್ಲಿ ಬಡವರು ಅರ್ಜಿ ಸಲ್ಲಿಸಿದರೂ, ಇಲ್ಲಿಯ ತನಕ ನಿವೇಶನವಾಗಲಿ ಮನೆಯಾಗಲಿ ಸರಕಾರ ಮಂಜೂರು ಮಾಡಿಲ್ಲ. ಹಾಗಾಗಿ, ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಯ ಮಂತ್ರಿಗಳು ಸಮಸ್ಯೆಯನ್ನು ಪರಿಹರಿಸಬೇಕೆಂದು ಒತ್ತಾಯಿಸಿದರು.







