ಆ್ಯಂಬಿಡೆಂಟ್ ವಂಚನೆ ಪ್ರಕರಣ: ಜನಾರ್ಧನ ರೆಡ್ಡಿ ಸೇರಿ ಇತರೆ ಆರೋಪಿಗಳ ವಿರುದ್ಧ 4800 ಪುಟಗಳ ಚಾರ್ಜ್‌ಶೀಟ್

ಬೆಂಗಳೂರು, ಫೆ.19: ಆ್ಯಂಬಿಡೆಂಟ್ ಕಂಪೆನಿಯ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಮಾಜಿ ಸಚಿವ ಜನಾಧರ್ನ ರೆಡ್ಡಿ ಸೇರಿದಂತೆ ಇತರೆ ಆರೋಪಿಗಳ ವಿರುದ್ಧ ಸಿಸಿಬಿ ಪೊಲೀಸರು ಮಂಗಳವಾರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಆ್ಯಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಕಂಪೆನಿ, ಸೈಯದ್ ಫರೀದ್ ಅಹ್ಮದ್, ಸೈಯದ್ ಆಫಾಕ್ ಅಹ್ಮದ್, ಇರ್ಫಾನ್ ಮಿರ್ಜಾ, ವಿಜಯ ಟಾಟಾ, ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ, ಮೆಹಫೂಝ್ ಅಲಿಖಾನ್, ಬಳ್ಳಾರಿ ರಮೇಶ್, ಇನಾಯತ್ ಹಾಗೂ ಅಶ್ರಫ್ ಅಲಿ ವಿರುದ್ಧ ಸಾಕ್ಷಾಧಾರಗಳನ್ನು ಸಂಗ್ರಹಿಸಿ, 4800 ಪುಟಗಳ 12 ಸಂಪುಟಗಳನ್ನೊಳಗೊಂಡ ದೋಷಾರೋಪಣ ಪತ್ರವನ್ನು ನಗರದ ಸಿಸಿಎಚ್-1ನೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಆಸ್ತಿ ಜಪ್ತಿ: ಪ್ರಕರಣದ ತನಿಖೆ ವೇಳೆ ಆ್ಯಂಬಿಡೆಂಟ್ ಮಾರ್ಕೆಟಿಂಗ್ ಪ್ರೈ.ಲಿ ನಿರ್ದೇಶಕರಾದ ಸೈಯದ್ ಫರೀದ್ ಅಹ್ಮದ್, ಸೈಯದ್ ಆಫಾಕ್ ಅಹ್ಮದ್ ಅವರಿಗೆ ಸೇರಿದ ಸರಾಯಿಪಾಳ್ಯದ 3 ನಿವೇಶನ, ಅಂಬೇಡ್ಕರ್ ಕಾಲೇಜ್ ಲೇಔಟ್‌ನಲ್ಲಿರುವ ಒಂದು ಫ್ಲಾಟ್, ಕಲಾಸಿಪಾಳ್ಯದಲ್ಲಿ 6 ಫ್ಲಾಟ್, ವಿವಿಧ ಕಡೆ 14 ಫ್ಲಾಟ್, ಆನೇಕಲ್ ತಾಲೂಕು ವ್ಯಾಪ್ತಿಯಲ್ಲಿ 17 ಗುಂಟೆ ಜಮೀನು ಸೇರಿದಂತೆ ಒಟ್ಟು 54 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ತಿಳಿಸಿದೆ.







