ಹಣ ಕೊಡುವ ರಾಜಕೀಯ ಪಕ್ಷಗಳ ನಿರ್ದೇಶನಕ್ಕೆ ‘ನಟಿಸಲು’ ಒಪ್ಪಿಕೊಂಡ ಸೆಲೆಬ್ರಿಟಿಗಳಿವರು
'ಕೋಬ್ರಾಪೋಸ್ಟ್' ಕಾರ್ಯಾಚರಣೆಯಲ್ಲಿ ಬೆತ್ತಲಾದ ಬಾಲಿವುಡ್ ಮಂದಿ

ಹೊಸದಿಲ್ಲಿ, ಫೆ. 19: ಶುಲ್ಕ ಪಡೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ನಿರ್ದಿಷ್ಟ ಪಕ್ಷಗಳ ಬಗ್ಗೆ ಪ್ರಚಾರ ಮಾಡಲು ಬಾಲಿವುಡ್, ಸಂಗೀತ ಹಾಗೂ ಟೆಲಿವಿಶನ್ ಕ್ಷೇತ್ರದ ಹಲವು ಸೆಲೆಬ್ರಿಟಿಗಳು ಒಪ್ಪಿಕೊಂಡಿದ್ದಾರೆ. ಇದರಲ್ಲಿ ಹೆಚ್ಚಿನವರು ಬಿಜೆಪಿ ಪರವಾಗಿ, ಕೆಲವರು ಆಪ್ ಹಾಗೂ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಲು ಅನುಮತಿ ನೀಡಿದ್ದಾರೆ ಎಂದು ಕೋಬ್ರಾಪೋಸ್ಟ್ ವರದಿ ಮಾಡಿದೆ.
ಕಾಲ್ಪನಿಕ ಸಾರ್ವಜನಿಕ ಸಂಪರ್ಕ ಏಜೆನ್ಸಿಯ ಉದ್ಯೋಗಿಗಳು ಎಂದು ಹೇಳುವ ಮೂಲಕ ‘ಆಪರೇಶನ್ ಕರೋಕೆ’ ಹೆಸರಿನಲ್ಲಿ ತನಿಖೆ ನಡೆಸಲಾಯಿತು ಎಂದು ‘ಕೋಬ್ರಾಪೋಸ್ಟ್’ ಹೇಳಿದೆ.
ಸಾಮಾಜಿಕ ಜಾಲತಾಣದಲ್ಲಿ ನಿರ್ದಿಷ್ಟ ರಾಜಕೀಯ ಪಕ್ಷಗಳ ಪರವಾಗಿ ಸಂದೇಶ ಪೋಸ್ಟ್ ಮಾಡಲು ಹಿನ್ನೆಲೆ ಗಾಯಕರಾದ ಅಭಿಜಿತ್ ಭಟ್ಟಾಚಾರ್ಯ, ಕೈಲಾಶ್ ಖೇರ್, ಮಿಕಾ ಸಿಂಗ್, ಬಾಬಾ ಸೆಹಗಲ್, ನಟರಾದ ಜಾಕಿಶ್ರಾಫ್, ಶಕ್ತಿ ಕಪೂರ್, ವಿವೇಕ್ ಒಬೆರಾಯ್, ಸೋನು ಸೂದ್, ಅಮಿಶಾ ಪಟೇಲ್, ಮಹಿಮಾ ಚೌಧರಿ, ಶ್ರೇಯಸ್ ತಲ್ಪಾಡೆ, ಪುನೀತ್ ಇಸ್ಸಾರ್, ಸುರೇಂದ್ರಪಾಲ್, ಪಂಕಜ್ ಧೀರಜ್ ಹಾಗೂ ಅವರ ಪುತ್ರ ನಿಕಿತಿನ್ ಧೀರ್ ಇಚ್ಛೆ ಹೊಂದಿದ್ದರು ಎಂದು ಕುಟುಕು ಕಾರ್ಯಾಚರಣೆ ಬಹಿರಂಗಗೊಳಿಸಿದೆ.
ಈ ಪಟ್ಟಿ ಒಳಗೊಂಡಿರುವ ಇತರ ನಟರೆಂದರೆ, ಟಿಸ್ಕಾ ಚೋಪ್ರಾ, ದೀಪ್ಸಿಖಾ ನಾಗ್ ಪಾಲ್, ಅಖಿಲೇಂದ್ರ ಮಿಶ್ರಾ, ರೋಹಿತ್ ರಾಯ್, ರಾಹುಲ್ ಭಟ್, ಸಲೀಮ್ ಝೈದಿ, ರಾಖಿ ಸಾವಂತ್, ಅಮನ್ ವರ್ಮಾ, ಹಿತೇನ್ ತೇಜ್ವಾನಿ ಹಾಗೂ ಅವರ ಪತ್ನಿ ಗೌರಿ ಪ್ರಧಾನ್, ಎವಿಲಿನ್ ಶರ್ಮಾ, ಮಿನಿಶಾ ಲಾಂಬಾ, ಕೊಯೆನಾ ಮಿತ್ರ, ಪೂನಂ ಪಾಂಡೆ, ಸನ್ನಿ ಲಿಯೋನ್, ಕಾಮಿಡಿಯನ್ ರಾಜು ಶ್ರೀವಾತ್ಸವ, ಸುನಿಲ್ ಪಾಲ್, ರಾಜ್ ಪಾಲ್ ಯಾದವ್, ಉಪಾಸನಾ ಸಿಂಗ್, ಕೃಷ್ಣ ಅಭಿಷೇಕ್, ವಿಜಯ್ ಈಶ್ವರ್ ಲಾಲ್ ಹಾಗೂ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ, ಡ್ಯಾನ್ಸರ್ ಸಂಭಾವನಾ ಸೇಥ್.
ಕೆಲವು ತಾರೆಯರು ಇಂತಹ ಸಂದೇಶಗಳನ್ನು ಪುಕ್ಕಟೆಯಾಗಿ ಪೋಸ್ಟ್ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಕೋಬ್ರಾ ಪೋಸ್ಟ್ ಹೇಳಿದೆ. ‘‘ತಮ್ಮ ಪಾನ್ ಹಾಗೂ ಬ್ಯಾಂಕಿಂಗ್ ವಿವರಗಳನ್ನು ರವಾನಿಸಲು ಅವರು ಒಪ್ಪಿಕೊಂಡಿದ್ದಾರೆ. ಕೆಲವು ಕಳುಹಿಸಿದ್ದಾರೆ. ಈ ಎಲ್ಲ ಪ್ರಕ್ರಿಯೆಗಳನ್ನು ಗುಪ್ತವಾಗಿ ಇರಿಸುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ. ಕೆಲವು ನಟರು, ತಮ್ಮ ಚಿತ್ರದ ಪ್ರಚಾರದ ಸಂದರ್ಭದಲ್ಲಿ ರಾಜಕೀಯ ಪಕ್ಷದ ಪರವಾಗಿ ಪ್ರಚಾರ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ’’ ಎಂದು ಕೋಬ್ರಾಪೋಸ್ಟ್ ಹೇಳಿದೆ.
ಆದಾಗ್ಯೂ, ಯಾವುದೇ ರಾಜಕೀಯ ಪಕ್ಷಗಳ ಪರವಾಗಿ ಪ್ರಚಾರ ನಡೆಸಲು ಕೆಲವು ಸೆಲೆಬ್ರೆಟಿಗಳಾದ ವಿದ್ಯಾ ಬಾಲನ್, ಅರ್ಷದ್ ವಾರ್ಸಿ, ರಝಾ ಮುರಾದ್ ಹಾಗೂ ಸೌಮ್ಯಾ ಟಂಡನ್ ನಿರಾಕರಿಸಿದ್ದಾರೆ ಎಂದು ಕೋಬ್ರಾ ಪೋಸ್ಟ್ ಹೇಳಿದೆ.
ಜಾಕಿಶ್ರಾಫ್: ಬಿಜೆಪಿಯ ಗ್ರಾಹಕರಲ್ಲಿ ಒಬ್ಬರಾಗಿರುವ ನಟ ಜಾಕಿ ಶ್ರಾಫ್ ಅವರನ್ನು ಫ್ಯೂಚರ್ ಸಾರ್ವಜನಿಕ ಸಂಪರ್ಕ ಕಂಪೆನಿಯ ಉದ್ಯೋಗಿಗಳೆಂದು ಕೋಬ್ರಾಪೋಸ್ಟ್‌ನ ಪತ್ರಕರ್ತರು ಸಂಪರ್ಕಿಸಿದರು. 2019ರ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಡಿಜಿಟಲ್ ಪ್ರಚಾರ ನಡೆಸಲು ಬಿಜೆಪಿ ಬಯಸುತ್ತಿದೆ. ಆದರೆ, ಬಹಿರಂಗವಾಗಿ ಅದು ಸಾಧ್ಯವಿಲ್ಲ ಎಂದು ಪತ್ರಕರ್ತರು ಜಾಕಿಶ್ರಾಫ್ ಅವರಲ್ಲಿ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಬಗ್ಗೆ ನನ್ನಂತಹ ಸೆಲೆಬ್ರಿಟಿಗಳು ಒಳ್ಳೆಯದನ್ನೇ ಹೇಳಿ ಅದಕ್ಕೆ ಹಣ ತೆಗೆದುಕೊಳ್ಳುವವರೆಗೆ ಸಮಸ್ಯೆ ಇಲ್ಲ ಎಂದರು.
ಕೈಲಾಶ್ ಖೇರ್: ಕೋಬ್ರಾ ಪೋಸ್ಟ್‌ನ ಪತ್ರಕರ್ತರು ಸಾರ್ವಜನಿಕ ಸಂಪರ್ಕ ಏಜೆಂಟ್ ಎಂದು ಗಾಯಕ ಕೈಲಾಸ್ ಖೇರ್ ಅವರನ್ನು ಸಂಪರ್ಕಿಸಿದಾಗ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬಿಜೆಪಿಗೆ ಪ್ರಚಾರ ನೀಡುವುದನ್ನು ಒಪ್ಪಿಕೊಂಡಿದ್ದಾರೆ.
ಬಾಬಾ ಸೆಹಗಲ್: “ನಾನು ಒಂದು ಟ್ವೀಟ್‌ಗೆ 2 ಲಕ್ಷ ರೂಪಾಯಿ ಶುಲ್ಕ ವಿಧಿಸಿದ್ದೇನೆ” ಎಂದು ಸೆಹಗಲ್ ಹೇಳಿದ್ದಾರೆ.
ಪೂನಂ ಪಾಂಡೆ: ಪೂನಂ ಅವರನ್ನು ಸಂಪರ್ಕಿಸಿದ ಕೋಬ್ರಾ ಪೋಸ್ಟ್ ಪತ್ರಕರ್ತರು ನಾವು ಸರಕಾರದ ಯೋಜನೆಗಳ ಪ್ರಚಾರ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ. ‘‘ನಾವು ನಿಮ್ಮ ಸಾಮಾಜಿಕ ಜಾಲತಾಣದ ಖಾತೆಯನ್ನು ಬಿಜೆಪಿ ಪರವಾಗಿ ಬಳಸಿಕೊಳ್ಳುತ್ತೇವೆ. ಆದರೆ, ಸಾರ್ವಜನಿಕರು ಪೂನಂ ಪಾಂಡೆ ಅವರೇ ಪೋಸ್ಟ್ ಮಾಡುತ್ತಾರೆ ಎಂದು ಭಾವಿಸುತ್ತಾರೆ’’ ಎಂದು ಪತ್ರಕರ್ತರು ಹೇಳಿದರು. ಅದಕ್ಕೆ ಪೂನಂ ಪಾಂಡೆ ಒಪ್ಪಿಕೊಂಡರು.







