2032ರ ಒಲಿಂಪಿಕ್ಸ್‌ಗೆ ಇಂಡೋನೇಶ್ಯ ಬಿಡ್
ಜಕಾರ್ತ, ಫೆ.19: ಕಳೆದ ಬೇಸಿಗೆಯಲ್ಲಿ ಏಶ್ಯನ್ ಗೇಮ್ಸ್ ನ್ನು ಯಶಸ್ವಿಯಾಗಿ ಸಂಘಟಿಸಿ ಶ್ಲಾಘನೆಗೆ ಪಾತ್ರವಾಗಿರುವ ಇಂಡೋನೇಶ್ಯ 2032ರ ಒಲಿಂಪಿಕ್ಸ್ ಕ್ರೀಡೆಗಳನ್ನು ಆಯೋಜಿಸಲು ಅಧಿಕೃತ ಬಿಡ್ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಡೋನೇಶ್ಯ ಅಧ್ಯಕ್ಷ ಜೊಕೊ ವಿಡೊಡೊ ಅವರ ಅಧಿಕೃತ ಬಿಡ್ ಪತ್ರವನ್ನು ಕಳೆದ ವಾರ ಲೌಸನ್ನಾದ ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ ಸ್ವಿಟ್ಝರ್ಲೆಂಡ್‌ನಲ್ಲಿರುವ ಇಂಡೋನೇಶ್ಯ ರಾಯಭಾರಿ ಮುಲೈಮಾನ್ ಹದದ್ ಸಲ್ಲಿಸಿದ್ದಾರೆಂದು ಮಂಗಳವಾರ ವಿದೇಶಾಂಗ ಸಚಿವಾಲಯ ಖಚಿತಪಡಿಸಿದೆ. ‘‘ಇಂಡೋನೇಶ್ಯ ಒಂದು ಸಾಮರ್ಥ್ಯವುಳ್ಳ ದೇಶ ಎಂದು ತೋರಿಸಲು ಇದು ಸೂಕ್ತ ಸಮಯ’’ ಎಂದು ಹೇಳಿಕೆಯೊಂದರಲ್ಲಿ ಹದದ್ ಹೇಳಿದ್ದರು. 2032ರ ಒಲಿಂಪಿಕ್ಸ್ ಕ್ರೀಡೆಗಳನ್ನು ಆಯೋಜಿಸಲು ಭಾರತವೂ ತನ್ನ ಆಸಕ್ತಿಯನ್ನು ತೋರಿಸಿದೆ. ಅದೇ ವೇಳೆ ದಕ್ಷಿಣ ಹಾಗೂ ಉತ್ತರ ಕೊರಿಯ ತಾವು ಜಂಟಿ ಬಿಡ್ ಸಲ್ಲಿಸುವುದಾಗಿ ಹೇಳಿವೆ.
Next Story





