ಫೆ.23ರಂದು ಬಿ.ಸಿ.ರೋಡಿನಲ್ಲಿ ವಿಶೇಷ ಚೇತನ ಮಕ್ಕಳ ಹಬ್ಬ

ಬಂಟ್ವಾಳ, ಫೆ. 21: "ಕೊಟ್ಟರೆ ಅವಕಾಶ, ಮುಟ್ಟುವೆವು ಆಕಾಶ" ಎಂಬ ಘೋಷವಾಕ್ಯದೊಂದಿಗೆ ಫೆ.23ರಂದು ಬೆಳಿಗ್ಗೆ 9:30ರಿಂದ ಸಂಜೆ 4ರವರೆಗೆ ವಿಶೇಷ ಚೇತನ ಮಕ್ಕಳ ಹಬ್ಬ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿ ರಾಧಾಕೃಷ್ಣ ಭಟ್ ತಿಳಿಸಿದ್ದಾರೆ.
ಅವರು ಗುರುವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಪ್ರಧಾನ ಅತಿಥಿಗಳಾಗಿ ವಿಶೇಷ ಚೇತನ ಮಕ್ಕಳು ಭಾಗವಹಿಸುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶೇಷ ಚೇತನ ಚೆಸ್ ಅಂತಾರಾಷ್ಟ್ರೀಯ ಪ್ರತಿಭೆ ಯಶಸ್ವಿನಿ ವಹಿಸಲಿದ್ದು, 7 ವಿಕಲಚೇನತ ಸಾಧಕರನ್ನು ಗೌರವಿಸಲಾ ಗುವುದು. ಎರಡು ವಿದ್ಯಾರ್ಥಿಗಳಿಂದ ಕವನ ಸಂಕಲನ ಬಿಡುಗಡೆಯಾಗಲಿದೆ. ಒಟ್ಟು 27 ಸ್ಟಾಲ್‍ಗಳು ಇರಲಿದ್ದು, 800 ರಿಂದ 900 ಮಂದಿ ಸೇರುವ ನಿರೀಕ್ಷೆ ಇದೆ ಎಂದರು.
ಸರಕಾರದಿಂದ ಗುರುತಿಸಲ್ಪಟ್ಟ ಸುಮಾರು 500 ಮಂದಿ ವಿಕಲಚೇತನರಿದ್ದು, ಇವರಲ್ಲಿ 87 ಮಂದಿ ಗೃಹಾಧರಿತರಿದ್ದಾರೆ, 37 ಮಂದಿ ಎಂಡೋಸಲ್ಫಾನ್ ನಿಂತ ತೊಂದರೆಗೊಳಗಾದವರು ಎಂದು ಅವರು ವಿವರಿಸಿದರು.
ಪೋಷಕರೊಂದಿಗೆ ಸಂತೋಷದ ಕ್ಷಣಗಳನ್ನು ಅನುಭವಿಸಲು ವಿವಿಧ ಖಾದ್ಯಗಳ ಸ್ಟಾಲ್‍ಗಳು, ವಿನೂತನ ರೀತಿಯ ವಿಶಿಷ್ಟ ಉದ್ಘಾಟನಾ ಕಾರ್ಯಕ್ರಮ, ವಿಶೇಷ ಚೇತನ ಮಕ್ಕಳಲ್ಲಿ ಅತ್ಯುನ್ನತ ಸಾಧನೆ ಮಾಡಿದ ಮಕ್ಕಳಿಗೆ ಗೌರವಾರ್ಪಣೆ, ವಿಶೇಷ ಚೇತನ ಮಕ್ಕಳ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಸೂಕ್ತ ವೇದಿಕೆ ಇಲ್ಲಿ ದೊರೆಯಲಿದೆ. ಮಕ್ಕಳಿಗೆ ವಿಶಿಷ್ಟ ಆಟದ ಸರಣಿಗಳು, ವಿಶೇಷವಾಗಿ ಸ್ವಾಗತಿಸಲು ವಾದ್ಯವೃಂದ ಹಾಗೂ ಬೊಂಬೆಗಳ ಮೆರುಗು ಇರಲಿದ್ದು, ಮಕ್ಕಳಿಗೆ ಕ್ಲೇ ಮಾಡೆಲಿಂಗ್, ಕ್ರಾಫ್ಟ್ ಗಳು, ವರ್ಣಮಯ ಚಿತ್ರಗಳ ರಚನೆಗೆ ಸೂಕ್ತ ವೇದಿಕೆ ಕಲ್ಪಿಸಲಾಗುವುದು. ಕರಕುಶಲ ವಸ್ತುಗಳ ಪ್ರದರ್ಶನ, ಸಾಧಕರೊಂದಿಗೆ ಸಂವಾದ, ಸ್ಮರಣೀಯ ಆಟಿಕೆಗಳ ಸ್ಟಾಲ್‍ಗಳು, ನುರಿತರಿಂದ ಮಾಹಿತಿ, ಜಾದೂ ಪ್ರದರ್ಶನ ಇಲ್ಲಿರಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ನಾರಾಯಣ ಗೌಡ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ನೋಣಯ್ಯ, ಬಿಆರ್‍ಸಿಯ ನೋಡಲ್ ಅಧಿಕಾರಿ ಸುರೇಖಾ ಯಳವರ ಉಪಸ್ಥಿತರಿದ್ದರು.







