ವಿದ್ಯೆಯೊಂದಿಗೆ ಮಕ್ಕಳಿಗೆ ಸಂಸ್ಕಾರ ಕಲಿಸಿ: ಕೇಂದ್ರ ಸಚಿವ ರಮೇಶ್ ಜಿಗಜಿಣಗಿ

ಬೆಳಗಾವಿ, ಫೆ.23: ಮಕ್ಕಳಿಗೆ ವಿದ್ಯೆ ಕಲಿಸುವುದರೊಂದಿಗೆ ಶಿಕ್ಷಕರು ಮತ್ತು ಪಾಲಕರು ಸಂಸ್ಕಾರವನ್ನು ಕೂಡಾ ಕಲಿಸಬೇಕು ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ಸಚಿವ ರಮೇಶ್ ಜಿಗಜಿಣಗಿ ಹೇಳಿದ್ದಾರೆ.
ನಗರದಲ್ಲಿರುವ ಕೇಂದ್ರೀಯ ವಿದ್ಯಾಲಯ ಸಂಖ್ಯೆ 3ರ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳೆ ನಾಳಿನ ಪ್ರಜೆಗಳು. ನಮ್ಮ ದೇಶದ ಭವಿಷ್ಯದ ಸಂಪತ್ತು ಹಾಗಾಗಿ ಶಿಕ್ಷಕರು ಆಸಕ್ತಿ ವಹಿಸುವುದಷ್ಟೇ ಅಲ್ಲದೆ ಶ್ರದ್ಧೆಯಿಂದ ಕಲಿಸಬೇಕು ಎಂದರು.
ನನ್ನ ಪಕ್ಕದ ಜಿಲ್ಲೆಗಳಲ್ಲಿ ಮೂರು ಕೇಂದ್ರಿಯ ವಿದ್ಯಾಲಯಗಳು ಇರುವುದು ನಮ್ಮೆಲ್ಲರ ಹೆಮ್ಮೆಯ ವಿಷಯ. ಈ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿದ ಮಕ್ಕಳಿಗೆ ಉಜ್ವಲವಾದ ಭವಿಷ್ಯವಿದೆ. ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಬೆಳಗಾವಿ ಸಂಸದ ಸುರೇಶ್ ಅಂಗಡಿ ಮಾತನಾಡಿ, ಮಚ್ಚೆಯಂತಹ ಹಿಂದುಳಿದ ಪ್ರದೇಶದಲ್ಲಿ ಕೇಂದ್ರೀಯ ವಿದ್ಯಾಲಯ ಪ್ರಾರಂಭವಾಗಿದ್ದು ಇಲ್ಲಿರುವ ಬಡ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಕಲಿಯಲು ತುಂಬಾ ಸಹಕಾರಿಯಾಗಿದೆ ಎಂದರು.
ಉಳ್ಳವರಿಗೆ ಎಲ್ಲಿಯಾದರೂ ಶಿಕ್ಷಣ ದೊರೆಯುತ್ತದೆ. ಆದರೆ ಬಡಮಕ್ಕಳಿಗೆ ಅಷ್ಟು ಸುಲಭವಾಗಿ ಶಿಕ್ಷಣ ದೊರೆಯುವುದಿಲ್ಲ. ಇಂತಹ ಶಾಲೆಗಳಲ್ಲಿ ಅವಕಾಶ ದೊರೆತರೆ ಅವರು ಉನ್ನತವಾದ ಸ್ಥಾನಮಾನವನ್ನೂ ಪಡೆಯಲು ಸಹಾಯಕವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕೇವಲ ಪ್ರಮಾಣ ಪತ್ರ ಪಡೆಯಲು ಕಲಿಯದೇ ಉತ್ತಮ ಜ್ಞಾನವನ್ನು ಪಡೆದುಕೊಳ್ಳಲು ಶಿಕ್ಷಣ ಕೇಂದ್ರಕ್ಕೆ ಈಗಿನ ಯುವಕ ಯುವತಿಯರು ಹೋಗಬೇಕು. ಎಲ್ಲ ವರ್ಗದ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆದುಕೊಳ್ಳಬೇಕು. ದೇಶದ ಅತ್ಯುತ್ತಮ ಕೇಂದ್ರೀಯ ವಿದ್ಯಾಲಯಗಳಲ್ಲಿ ಬೆಳಗಾವಿ ಕೇಂದ್ರಿಯ ವಿದ್ಯಾಲಯ ಒಂದಾಗಬೇಕೆಂಬ ಆಶಯ ಅವರು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಉಪ ವಿಭಾಗಾಧಿಕಾರಿ ಕವಿತಾ ಯೋಗಪ್ಪನವರ, ಬೆಳಗಾವಿ ಕೇಂದ್ರೀಯ ವಿದ್ಯಾಲಯ ಸಂ.3ರ ಪ್ರಾಚಾರ್ಯ ಶಶಿ ಇ.ಕೆ., ಧಾರವಾಡ ಕೇಂದ್ರಿಯ ವಿದ್ಯಾಲಯದ ಪ್ರಾಂಶುಪಾಲ ಮುರುಳಿಕೃಷ್ಣ ಸೇರಿದಂತೆ ಇನ್ನಿತರ ಅನೇಕರು ಉಪಸ್ಥಿತರಿದ್ದರು.







