ಅನಾನಸ್ ತಿಂದರೆ ಈ ರೋಗಗಳು ದೂರ…
ಪೈನಾಪಲ್ ಅಥವಾ ಅನಾನಸ್ ಹಣ್ಣನ್ನು ಇಷ್ಟಪಡದವರು ಯಾರಾದರೂ ಇದ್ದಾರಾ? ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಅದರ ಸಿಹಿ-ಒಗರು ರುಚಿ ಇಷ್ಟ. ಆದರೆ ಇದರ ಆರೋಗ್ಯಲಾಭಗಳನ್ನು ತಿಳಿದವರು ಕಡಿಮೆ. ಇಲ್ಲಿದೆ ಅಂತಹ ಕೆಲವು ಆರೋಗ್ಯಲಾಭಗಳ ಕುರಿತು ಮಾಹಿತಿ....
►ಪಚನ ಕ್ರಿಯೆಯನ್ನು ಹೆಚ್ಚಿಸುತ್ತದೆ
ಅನಾನಸ್ ಪಚನ ಕ್ರಿಯೆಗೆ ನೆರವಾಗುತ್ತದೆ ಮತ್ತು ಉರಿಯೂತವನ್ನು ಕಡಿಮೆಗೊಳಿಸುತ್ತದೆ. ಅದರಲ್ಲಿ ಸಮೃದ್ಧವಾಗಿರುವ ಬ್ರೋಮಲೈನ್ ಎಂಬ ಜೀರ್ಣ ಕಿಣ್ವವು ಜೀರ್ಣಿಸಲು ಕಠಿಣವಾಗಿರುವ ಪ್ರೋಟಿನ್‌ನ್ನು ವಿಭಜಿಸುತ್ತದೆ. ಅದು ಜೀರ್ಣಾಂಗವನ್ನು ಆರೋಗ್ಯಯುತವಾಗಿರಿಸಲು ನೆರವಾಗುತ್ತದೆ. ಅನಾನಸ್ ಹೊಟ್ಟೆನೋವು, ಎದೆಯುರಿ, ಅತಿಸಾರ, ಹೊಟ್ಟೆಯುಬ್ಬರ,ಮಲಬದ್ಧತೆ ಮತ್ತು ವಾಕರಿಕೆಯಂತಹ ಸಮಸ್ಯೆಗಳಿಂದ ಮುಕ್ತಿಯನ್ನೂ ನೀಡುತ್ತದೆ.
►ಸಮೃದ್ಧ ವಿಟಾಮಿನ್ ಸಿ
ಅನಾನಸ್‌ನಲ್ಲಿ ಸಮೃದ್ಧವಾಗಿರುವ ವಿಟಾಮಿನ್ ಸಿ ನಮ್ಮ ಶರೀರಕ್ಕೆ ಹಲವಾರು ಲಾಭಗಳನ್ನು ನೀಡುತ್ತದೆ. ವಿವಿಧ ವೈರಸ್‌ಗಳಿಂದ ಶರೀರಕ್ಕೆ ರಕ್ಷಣೆ ನೀಡುವ ಅದು ಸೋಂಕುಗಳ ವಿರುದ್ಧ ಹೋರಾಡಲು ಶರೀರವನ್ನು ಸದೃಢಗೊಳಿಸುತ್ತದೆ. ಅದು ಹೃದಯ ರಕ್ತನಾಳಗಳ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ವಿವಿಧ ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
►ದೇಹತೂಕವನ್ನು ಕಡಿಮೆ ಮಾಡುತ್ತದೆ
ದೇಹತೂಕವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಅನಾನಸ್ ನೆರವಾಗುತ್ತದೆ. ಅದು ಕಡಿಮೆ ಕ್ಯಾಲರಿಗಳನ್ನು ಹೊಂದಿದ್ದು, ಅದರಲ್ಲಿ ಅಧಿಕ ಪ್ರಮಾಣದಲ್ಲಿರುವ ನಾರು ಹಸಿವೆಯನ್ನು ತಡೆದು ತುಂಬ ಸಮಯದವರೆಗೆ ಹೊಟ್ಟೆ ತುಂಬಿರುವ ಅನುಭವವನ್ನು ನೀಡುತ್ತದೆ. ಅದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನೂ ಕಾಯ್ದುಕೊಳ್ಳಲು ನೆರವಾಗುತ್ತದೆ.
►ದೃಷ್ಟಿಯನ್ನು ಉತ್ತಮಗೊಳಿಸುತ್ತದೆ
ಅನಾನಸ್ ಕಣ್ಣಿನ ಆರೋಗ್ಯಕ್ಕೂ ಲಾಭದಾಯಕವಾಗಿದೆ. ಅದು ದೃಷ್ಟಿ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಅನಾನಸ್ ಸೇವನೆಯಿಂದ ಕಣ್ಣಿನ ಪೊರೆಯ ಅಪಾಯವು ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಅದರಲ್ಲಿರುವ ಉತ್ಕರ್ಷಣ ನಿರೋಧಕಗಳು ಕಣ್ಣುಗಳಲ್ಲಿಯ ಸ್ನಾಯುಗಳ ಅವನತಿಯನ್ನು ತಡೆಯುತ್ತವೆ.
►ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ
ಅನಾನಸ್‌ನಲ್ಲಿರುವ ಮ್ಯಾಂಗನೀಸ್ ಮೂಳೆಗಳ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಅದು ಸಂಯೋಜಕ ಅಂಗಾಂಶಗಳ ಆರೋಗ್ಯವನ್ನೂ ಕಾಯ್ದುಕೊಳ್ಳುತ್ತದೆ. ಅನಾನಸ್ ಮೂಳೆಗಳ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುವ ಜೊತೆಗೆ ಅಸ್ಥಿರಂಧ್ರತೆಯ ಅಪಾಯವನ್ನು ತಗ್ಗಿಸುತ್ತದೆ. ಕ್ಯಾಲ್ಸಿಯಂ ಜೊತೆಗೆ ಅನಾನಸ್‌ನ ಸೂಕ್ತ ಸೇವನೆಯು ಜೀವಿತವಿಡೀ ಮೂಳೆಗಳು ಆರೋಗ್ಯಯುತವಾಗಿರುವಂತೆ ಮಾಡುತ್ತದೆ.
ಕಿವಿಮಾತು: ನೀವು ಹೆಚ್ಚು ನಾರು ಸೇವಿಸುತ್ತಿಲ್ಲವಾದರೆ ಏಕಾಏಕಿ ಅನಾನಸ್ ಸೇವನೆಯನ್ನು ಹೆಚ್ಚಿಸಬೇಡಿ. ಅದನ್ನು ಕ್ರಮೇಣ ನಿಮ್ಮ ಆಹಾರದಲ್ಲಿ ಹೆಚ್ಚಿಸಿಕೊಳ್ಳಿ. ನೀವು ಅನಾನಸ್ ರಸವನ್ನು ಸೇವಿಸುವುದಿದ್ದರೆ ಅದಕ್ಕೆ ಸಕ್ಕರೆಯನ್ನು ಸೇರಿಸಬೇಡಿ. ನೀವು ಯಾವುದೇ ಔಷಧಿಯನ್ನು ಸೇವಿಸುತ್ತಿದ್ದರೆ ನೀವು ತಿನ್ನಬಹುದಾದ ಅನಾನಸ್ ಪ್ರಮಾಣದ ಬಗ್ಗೆ ೆ ನಿಮ್ಮ ವೈದ್ಯರಿಂದ ತಿಳಿದುಕೊಳ್ಳಿ.