ಗೋ ಬ್ಯಾಕ್ ಚಳವಳಿ; ಟಿಕೆಟ್ ಆಸೆಗಾಗಿ ನನಗೆ ಅವಮಾನ: ಕರಂದ್ಲಾಜೆ

ಉಡುಪಿ, ಫೆ. 24: ‘ನನಗೆ ಹಣ ಬಲ, ಜಾತಿ ಬಲ, ಬಾಹುಬಲ ಮತ್ತು ಬೆಂಬಲ ಕೊಡುವವರಿಲ್ಲ ಎಂಬ ಕಾರಣಕ್ಕೆ ಅವಮಾನ ಮಾಡುವ ಹಾಗೂ ಎತ್ತಿಕಟ್ಟುವ ಕೆಲಸವನ್ನು ಟಿಕೆಟ್ ಆಕಾಂಕ್ಷಿಗಳು ಮಾಡುತ್ತಿದ್ದಾರೆ. ಇದಕ್ಕೆಲ್ಲ ನಾನು ಹೆದರುವ ಪ್ರಶ್ನೆಯೇ ಇಲ್ಲ’ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿ ರವಿವಾರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶೋಭಾ ಕರಂದ್ಲಾಜೆ, ತನ್ನ ವಿರುದ್ಧ ಗೋ ಬ್ಯಾಕ್ ಚಳವಳಿ ನಡೆಸುತ್ತಿರುವವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಣ್ಣ ಯುವಕರ ಗುಂಪನ್ನು ಕಟ್ಟಿ ಕೊಂಡು ಕೇವಲ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ಹಾಗೂ ಟಿಕೆಟ್ ಆಸೆಗಾಗಿ ನನಗೆ ಅವಮಾನ ಮಾಡುವಂತ ಕಾರ್ಯ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಕೇಂದ್ರ ಹಾಗೂ ರಾಜ್ಯದ ನಾಯಕರು ನನಗೆ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ನನ್ನ ವಿರುದ್ಧ ಧ್ವನಿ ಎತ್ತುವವರ ಪಕ್ಷಕ್ಕೆ ನೀಡಿದ ಕೊಡುಗೆ ಏನು. ನಾನು ಕಳೆದ 20-25ವರ್ಷಗಳ ಕಾಲ ಪಕ್ಷಕ್ಕಾಗಿ ಮಣ್ಣು ಹೊತ್ತಿದ್ದೇನೆ ಮತ್ತು ಓಡಾಡಿದ್ದೇನೆ. ಮೊದಲು ಅವರ ಕೊಡುಗೆ ಏನು ಎಂಬುದನ್ನು ನನ್ನ ಮುಂದೆ ಹೇಳಲಿ, ನಂತರ ಟಿಕೆಟ್ ಕೇಳುವ ಕೆಲಸ ಮಾಡಲಿ ಎಂದು ಅವರು ಕಟುವಾಗಿ ಟೀಕಿಸಿದರು.
ಸಂಸದೆಯಾಗಿ ನನ್ನ ಕರ್ತವ್ಯ ಮಾಡಿ ಈ ಜಿಲ್ಲೆಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇನೆ. ಪಕ್ಷದ ಟಿಕೆಟ್ ಕೊಡುವಂತದ್ದು ಪಕ್ಷದ ಹಿರಿಯ ಜವಾಬ್ದಾರಿ. ಪಕ್ಷಕ್ಕೆ ಸಲ್ಲಿಸಿರುವ ಸೇವೆ, ಕೆಲಸ ಕಾರ್ಯಗಳ ಆಧಾರದಲ್ಲಿ ಬಿಜೆಪಿಯಲ್ಲಿ ಟಿಕೆಟ್ ನೀಡಲಾಗುತ್ತದೆ. ಗೋ ಬ್ಯಾಕ್ ಚಳವಳಿ ನಡೆಸುವುದರಿಂದ ಪಕ್ಷಕ್ಕೆ ಹಾನಿಯೇ ಹೊರತು ಯಾವುದೇ ಲಾಭ ಆಗುವುದಿಲ್ಲ ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರದಿಂದ ಸಾಕಷ್ಟು ಯೋಜನೆಗಳನ್ನು ಜಿಲ್ಲೆಗೆ ತಂದಿದ್ದೇನೆ. ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಈ ಬಗ್ಗೆ ನನಗೆ ಸಮಾಧಾನ ಇದೆ. ಇನ್ನಷ್ಟು ಕೆಲಸ ಮಾಡುವ ಇಚ್ಛೆ ಕೂಡ ಇದೆ. ಅದನ್ನು ಮುಂದಿನ ದಿನಗಳಲ್ಲಿ ಮಾಡುತ್ತೇನೆ. ಮುಂದಿನ ಚುನಾವಣೆಯಲ್ಲಿ ಪಕ್ಷ ಸ್ಪರ್ಧೆ ಮಾಡುವಂತೆ ಸೂಚಿಸಿದರೆ ನಾನು ಸ್ಪರ್ಧೆ ಮಾಡುತ್ತೇನೆ. ಪಕ್ಷ ಕೊಡುವ ಜವಾಬ್ದಾರಿ ನಿರ್ವಹಿಸಲು ನಾನು ಬದ್ಧನಾಗಿದ್ದೇನೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಎಂಪಿ ಗಂಡಸರು ಏನು ಮಾಡಿದ್ದಾರೆ ?
ಇಷ್ಟು ವರ್ಷಗಳ ಕಾಲ ಇಲ್ಲಿ ಸಂಸದರಾಗಿದ್ದ ಗಂಡಸರಿಗೆ ನಾನು ಸವಾಲು ಹಾಕುತ್ತೇನೆ. ಅವರು ಏನು ಕೆಲಸ ಮಾಡಿದ್ದಾರೆ. ಯಾಕೆ ನಾನು ಮಾಡಿದ ಕೆಲಸಗಳನ್ನು ಅವರು ಈವರೆಗೆ ಮಾಡಿಲ್ಲ. ನಾನು ಪಾಸ್‌ಪೋರ್ಟ್ ಕಚೇರಿ, ಕೇಂದ್ರೀಯ ವಿದ್ಯಾಲಯ, ಜೆಮ್ಸ್ ಆ್ಯಂಡ್ ಜುವೆಲ್ಲರ್ಸ್‌ಗೆ ಸರ್ಟಿಫಿಕೇಟ್ ಕಾಲೇಜು, ರಸ್ತೆ ಅತ್ಯಂತ ಹೆಚ್ಚು ಸಿಆರ್‌ಎಫ್ ಫಂಡ್, ಎಲ್ಲ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಕೆಲಸ ಮಾಡಿದ್ದೇನೆ. ಈ ಹಿಂದಿನವರು ಇದೆಲ್ಲ ಮಾಡಿಲ್ಲ. ಹಾಗಾಗಿ ನನಗೆ ಸಾಕಷ್ಟು ಕೆಲಸಗಳು ಉಳಿದುಕೊಂಡಿತ್ತು. ಆ ಕೆಲಸಗಳನ್ನು ಮಾಡಿದ್ದೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.







