ಬಜೆಟ್‌ನಲ್ಲಿ ಮುಸ್ಲಿಮರಿಗೆ ಶೇ.15 ರಷ್ಟು ಪಾಲು ಅಗತ್ಯ: ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಶಂಶುಲ್ ಹಕ್ ಖಾದ್ರಿ

ಬೆಂಗಳೂರು, ಫೆ.24: ರಾಜ್ಯದಲ್ಲಿರುವ ಮುಸ್ಲಿಮರಿಗೆ ಜನಸಂಖ್ಯೆಗೆ ಅನುಗುಣವಾಗಿ, ಬಜೆಟ್‌ನಲ್ಲಿಯೂ ಶೇ.15ರಷ್ಟು ಪಾಲು ಸಿಗಬೇಕು. ಈ ನಿಟ್ಟಿನಲ್ಲಿ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಮುಸ್ಲಿಂ ಜಮಾಅತ್(ಕೆಎಂಜೆ) ರಾಜ್ಯಾಧ್ಯಕ್ಷ ಮೌಲಾನ ಶಂಶುಲ್ ಹಕ್ ಖಾದ್ರಿ ಆಗ್ರಹಿಸಿದರು.
ರವಿವಾರ ನಗರದ ಕಾಟನ್ ಪೇಟೆಯಲ್ಲಿರುವ ದರ್ಗಾ ಹಝ್ರತ್ ಲಕ್ಕಡ್ ಶಾ ವಲಿ ಕಚೇರಿಯಲ್ಲಿ ನಡೆದ ಕರ್ನಾಟಕ ಮುಸ್ಲಿಮ್ ಜಮಾಅತ್‌ನ ರಾಜ್ಯ ಪದಾಧಿಕಾರಿಗಳ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಮುಸ್ಲಿಮರಿಗೆ ನ್ಯಾಯ ಸಮ್ಮತವಾಗಿ ಹಕ್ಕುಗಳು ಸಿಗಬೇಕು. ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ, ಉದ್ಯೋಗಾವಕಾಶಗಳು ಲಭ್ಯವಾಗಬೇಕು. ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಕನಿಷ್ಠ 5-6 ಮಂದಿ ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಕೆಎಂಜೆ ಪ್ರಧಾನ ಕಾರ್ಯದರ್ಶಿ ಮೌಲಾನ ಎನ್.ಕೆ.ಎಂ.ಶಾಫಿ ಸಅದಿ ಮಾತನಾಡಿ, ಗುಲ್ಬರ್ಗ, ಬೀದರ್ ಅಥವಾ ಬಿಜಾಪುರದಲ್ಲಿ ಮುಸ್ಲಿಮರಿಗಾಗಿ ಒಂದು ಇಸ್ಲಾಮಿಕ್ ವಿಶ್ವವಿದ್ಯಾಲಯ ಹಾಗೂ ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ ಅಥವಾ ಬೆಂಗಳೂರಿನಲ್ಲಿ ಮಹಿಳೆಯರಿಗಾಗಿ ಒಂದು ಪ್ರತ್ಯೇಕ ಇಸ್ಲಾಮಿಕ್ ವಿಶ್ವವಿದ್ಯಾಲಯವನ್ನು ಸರಕಾರ ಸ್ಥಾಪಿಸಿಕೊಡಬೇಕು ಎಂದರು.
ರಾಜ್ಯದ ಶೇ.85ರಷ್ಟು ಮುಸ್ಲಿಮರ ಬೆಂಬಲದಿಂದ ಈ ಸರಕಾರ ರಚನೆಯಾಗಿದೆ. ನಮ್ಮ ಸಮುದಾಯದ 7 ಜನ ಶಾಸಕರಿದ್ದು, ಈ ಪೈಕಿ ಮೂವರನ್ನು ಸಚಿವರನ್ನಾಗಿ ಮಾಡಿದ್ದಾರೆ. ಅವರಿಗೆ ಯಾವುದೇ ಪ್ರಮುಖ ಖಾತೆಗಳನ್ನು ನೀಡಿಲ್ಲ. ಮುಸ್ಲಿಮ್ ಸಚಿವರಿಗೆ ಪ್ರಮುಖ ಖಾತೆಗಳನ್ನು ನೀಡಬೇಕು. ನಿಗಮ, ಮಂಡಳಿಗಳ ನೇಮಕಾತಿಯಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಹಿಂದುಳಿದ ವರ್ಗಗಳಲ್ಲಿ ಉನ್ನತ ಶಿಕ್ಷಣದ ಪ್ರಮಾಣ ಶೇ.22 ರಷ್ಟಿದೆ. ಇದರಲ್ಲಿ ಮುಸ್ಲಿಮರ ಪ್ರಮಾಣ ಕೇವಲ ಶೇ.4ರಷ್ಟು. ಅದನ್ನು ಶೇ.15ರಷ್ಟಕ್ಕೆ ತಲುಪಿಸಬೇಕು. ಹಿಂದಿನ ಸರಕಾರದ ಅವಧಿಯಲ್ಲಿ ಮಾಡಿಸಿದ್ದ ಜಾತಿವಾರು ಜನಗಣತಿ ವರದಿಯನ್ನು ಸರಕಾರ ಶೀಘ್ರದಲ್ಲಿ ಬಿಡುಗಡೆ ಮಾಡಬೇಕು ಎಂದು ಶಾಫಿ ಸಅದಿ ಆಗ್ರಹಿಸಿದರು.
ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಸ್ಥಾನವನ್ನು ಮುಸ್ಲಿಮರಿಗೆ ನೀಡಬೇಕು. ರಾಜ್ಯದಲ್ಲಿ 14 ಮುಸ್ಲಿಮ್ ಐಎಎಸ್ ಹಾಗೂ ಹಲವಾರು ಕೆಎಎಸ್ ಅಧಿಕಾರಿಗಳಿದ್ದು, ಅವರಿಗೆ ಸರಕಾರದಲ್ಲಿ ಸೂಕ್ತ ಸ್ಥಾನ ಮಾನ ನೀಡಬೇಕು. ಅಕ್ರಮ್ ಪಾಷ ಅವರನ್ನು ಹಾಸನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿರುವುದು ಸ್ವಾಗತಾರ್ಹ ಎಂದು ಅವರು ಹೇಳಿದರು.
ಎಪ್ರಿಲ್ ವೇಳೆಗೆ ಕರ್ನಾಟಕ ಮುಸ್ಲಿಂ ಜಮಾಅತ್‌ನ 30 ಜಿಲ್ಲಾ ಹಾಗೂ 194 ತಾಲೂಕು ಮಟ್ಟದ ಸಮಿತಿಗಳು ಅಸ್ವಿತ್ವಕ್ಕೆ ಬರಲಿವೆ. ಫೆ.26ರಂದು ಚಿಕ್ಕಬಳ್ಳಾಪುರ, ಮಾ.1ರಂದು ಕೊಡಗು ಜಿಲ್ಲಾ ಸಮಿತಿಗಳು ರಚನೆಯಾಗಲಿವೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮಿತಿಗಳ ರಚನೆಯ ಉಸ್ತುವಾರಿಯನ್ನು ಮೌಲಾನ ಅಬುಸುಫಿಯಾನ್ ಮದನಿ ವಹಿಸಿಕೊಂಡಿದ್ದಾರೆ ಎಂದು ಶಾಫಿ ಸಅದಿ ತಿಳಿಸಿದರು.
ನಮ್ಮ ಸಂಘಟನೆಯು 10 ಲಕ್ಷ ಸದಸ್ಯರ ನೋಂದಣಿ ಗುರಿ ಹೊಂದಿದೆ. ಈಗಾಗಲೇ 1.15 ಲಕ್ಷ ಸದಸ್ಯರು ಅನಧಿಕೃತವಾಗಿ ದಾಖಲಾಗಿದ್ದಾರೆ. ಅವರನ್ನು ಶೀಘ್ರದಲ್ಲೆ ಅಧಿಕೃತಗೊಳಿಸಲಾಗುವುದು. ಮುಸ್ಲಿಮರಿಗೆ ಮತದಾರರ ಗುರುತಿನ ಚೀಟಿ ಮಾಡಿಸುವುದು, ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಧಾರ್ಮಿಕ ವಿದ್ವಾಂಸರ ನಾಯಕತ್ವದಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.
ಅಗತ್ಯವಿರುವ ಪ್ರದೇಶಗಳಲ್ಲಿ ಮಸೀದಿ, ಮದ್ರಸಾ, ಶಾಲೆ, ಕಾಲೇಜುಗಳನ್ನು ನಿರ್ಮಿಸಲಾಗುವುದು. ಮುಸ್ಲಿಮರಿಗೆ ಖಬರಸ್ಥಾನ್‌ಗಳಿಗೆ ಅಗತ್ಯವಿರುವ ಭೂಮಿಯನ್ನು ಸರಕಾರ ಒದಗಿಸಿಕೊಡಬೇಕು. ವಕ್ಫ್ ಬೋರ್ಡ್‌ನಲ್ಲಿರುವ ಆಸ್ತಿಗಳ ಲಾಭ ಬಡ ಮುಸ್ಲಿಮರಿಗೆ ತಲುಪಿಸುವ ನಿಟ್ಟಿನಲ್ಲಿ ಯಾವ ರೀತಿಯ ಕೆಲಸ ಮಾಡಬೇಕು ಎಂಬುದರ ಕುರಿತು ಉಲಮಾಗಳ ಮಾರ್ಗದರ್ಶನ ಪಡೆಯಬೇಕು ಎಂದು ಅವರು ತಿಳಿಸಿದರು. ಗಲ್ಫ್ ರಾಷ್ಟ್ರಗಳಿಂದ ಸುಮಾರು 10 ಲಕ್ಷ ಜನ ನಿರುದ್ಯೋಗಿಗಳಾಗಿ ರಾಜ್ಯಕ್ಕೆ ಹಿಂದಿರುಗಿದ್ದಾರೆ. ಅವರಿಗೆ ಉದ್ಯೋಗ ಕಲ್ಪಿಸಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಶಾಫಿ ಸಅದಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಮುಸ್ಲಿಮ್ ಜಮಾಅತ್‌ನ ರಾಜ್ಯ ಉಪಾಧ್ಯಕ್ಷರಾದ ಮೌಲಾನ ಅಬುಸುಫಿಯಾನ್ ಮದನಿ, ಮೌಲಾನ ಮುಫ್ತಿ ಮಹಮೂದ್ ಉಸ್ತಾದ್, ಮೌಲಾನ ಶಬ್ಬೀರ್ ಅಹ್ಮದ್ ರಝ್ವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







