ಅತ್ಯಾಚಾರ ಸಂತ್ರಸ್ತೆಗೆ 3.75 ಲಕ್ಷ ಪರಿಹಾರ: ಬಾಲಕಿಯ ಗರ್ಭದ ಭ್ರೂಣವನ್ನು ತೆಗೆಯಲು ನಿರಾಕರಿಸಿದ ಹೈಕೋರ್ಟ್

ಬೆಂಗಳೂರು, ಫೆ.24: ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿಯ ಜೀವಕ್ಕೆ ಅಪಾಯವಿರುವ ಕಾರಣ ಆಕೆಯ ಗರ್ಭದಲ್ಲಿರುವ 34 ವಾರಗಳ ಭ್ರೂಣವನ್ನು ಹೊರ ತೆಗೆಯಲು ಅನುಮತಿ ನಿರಾಕರಿಸಿರುವ ಹೈಕೋರ್ಟ್, ಆಕೆಯ ವೈದ್ಯಕೀಯ ಆರೈಕೆ ನಿರ್ವಹಿಸಿ ಸೂಕ್ತ ಪರಿಹಾರ ನೀಡಬೇಕೆಂದು ಸರಕಾರಕ್ಕೆ ಆದೇಶಿಸಿದೆ.
ಅತ್ಯಾಚಾರಕ್ಕೆ ಒಳಗಾಗಿ ಗರ್ಭವತಿಯಾಗಿರುವ ಶಿವಮೊಗ್ಗ ಜಿಲ್ಲೆಯ ಬಾಲಕಿಯ ಸಂಕಷ್ಟವನ್ನು ಆಲಿಸಿರುವ ಹೈಕೋರ್ಟ್, ಬೇಡವಾದ ಭ್ರೂಣವನ್ನು ತೆಗೆಸಬೇಕೆನ್ನುವ ಆಕೆಯ ಮನವಿ ಪುರಸ್ಕರಿಸಿಲ್ಲ. ಆದರೂ ಮಾನವೀಯತೆ ಮೆರೆದ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರು, ಸಂತ್ರಸ್ತೆಗೆ ಸರಕಾರದಿಂದ 3.75 ಲಕ್ಷ ಪರಿಹಾರ ನೀಡಬೇಕು. ಆಕೆಗೆ ಪ್ರಸವ ಸಮಯದಲ್ಲಿ ಸೂಕ್ತ ಆರೈಕೆ ನೀಡಬೇಕೆಂದು ಆದೇಶ ನೀಡಿದ್ದಾರೆ.
ವೈದ್ಯಕೀಯ ವರದಿಯಲ್ಲಿ ಭ್ರೂಣಕ್ಕೆ 34 ವಾರ ಆಗಿರುವುದರಿಂದ ಈ ಹಂತದಲ್ಲಿ ಅದನ್ನು ತೆಗೆಸಲು ಮುಂದಾದರೆ ಅದು ಸಂತ್ರಸ್ತೆಯ ಜೀವಕ್ಕೆ ಮುಳುವಾಗಲಿದೆ. ಹೀಗಾಗಿ, ಈ ಹಂತದಲ್ಲಿ ಭ್ರೂಣ ತೆಗೆಸುವ ಆಕೆಯ ಕೋರಿಕೆ ಮನ್ನಿಸಲಾಗದು. ಆದರೆ ಪರಿಹಾರ ಕೊಡಿಸಬೇಕೆನ್ನುವ ಇನ್ನೊಂದು ಮನವಿಯನ್ನು ಪುರಸ್ಕರಿಸಲಾಗುವುದು ಎಂದು ನ್ಯಾಯಪೀಠ ಹೇಳಿದೆ.
ನ್ಯಾಯಪೀಠ ನಿರ್ದೇಶನ: ಅತ್ಯಾಚಾರ ಸಂತ್ರಸ್ತೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ 3 ಲಕ್ಷ ರೂ.ಪರಿಹಾರ ನೀಡಬೇಕು. ಅಲ್ಲದೆ, ರಾಜ್ಯ ಸರಕಾರ ಹೊಸದಾಗಿ ಜಾರಿಗೊಳಿಸಿರುವ ಸಂತ್ರಸ್ತರ ಪರಿಹಾರವನ್ನು ಜಿಲ್ಲಾಧಿಕಾರಿ ನೀಡಬೇಕು. ಶಿವಮೊಗ್ಗ ಜಿಲ್ಲಾಸ್ಪತ್ರೆ ಆಕೆಯನ್ನು ಕಾಲ ಕಾಲಕ್ಕೆ ತಪಾಸಣೆ ಮಾಡಿ ಅಗತ್ಯ ಆರೈಕೆ ನೀಡಬೇಕು. ಜೊತೆಗೆ ಮಗುವಿಗೆ ಜನ್ಮ ನೀಡುವವರೆಗೆ ಮತ್ತು ನಂತರವೂ ಆಕೆಗೆ ಆರೈಕೆ ಮಾಡಬೇಕೆಂದು ನ್ಯಾಯಪೀಠ ಆದೇಶ ನೀಡಿದೆ. ಒಂದು ವೇಳೆ ಮಗು ಜನನದ ನಂತರ ಸಂತ್ರಸ್ತೆ ಮತ್ತು ಆಕೆಯ ಕುಟುಂಬದವರು ಮಗುವನ್ನು ದತ್ತು ನೀಡುವ ಇಚ್ಛೆ ತೋರಿದರೆ ಕೇಂದ್ರಿಯ ದತ್ತು ಸಂಪನ್ಮೂಲ ಪ್ರಾಧಿಕಾರದ ಅಧಿಕಾರಿಗಳು ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು ಎಂದು ಆದೇಶಿಸಿರುವ ನ್ಯಾಯಪೀಠ, ಬಾಲಕಿ ಇನ್ನೂ ವಿದ್ಯಾರ್ಥಿಯಾಗಿರುವುದರಿಂದ ಆಕೆಯ ಶಿಕ್ಷಣವನ್ನು ಮುಂದುವರಿಸಲು ಕ್ರಮ ಕೈಗೊಳ್ಳಬೇಕೆಂದು ಅವರ ಪೋಷಕರಿಗೆ ಸೂಚಿಸಿದೆ.
ಪ್ರಕರಣದ ವಿವರ: ಪ್ರೌಢಶಾಲೆಯಲ್ಲಿ ಓದುತ್ತಿರುವ ಬಾಲಕಿ 2018ರ ಎ.16ರಂದು ಅತ್ಯಾಚಾರಕ್ಕೆ ಒಳಗಾಗಿದ್ದರು. ಭಯದಿಂದಾಗಿ ಆಕೆ ತಮ್ಮ ಮನೆಯವರೂ ಸೇರಿ ಯಾರಿಗೂ ಘಟನೆಯ ಬಗ್ಗೆ ತಿಳಿಸಿರಲಿಲ್ಲ. ಆದರೆ ಕೆಲವು ತಿಂಗಳ ನಂತರ ಆಕೆ ಹೊಟ್ಟೆನೋವು ಎಂದು ಮನೆಯವರಿಗೆ ತಿಳಿಸಿದಾಗ, ಅವರು ಶಿವಮೊಗ್ಗದ ಆಸ್ಪತ್ರೆಗೆ ಕರೆತಂದರು. ಆಗ ಪರೀಕ್ಷೆಗೆ ಒಳಪಡಿಸಿದ ಆ ಬಾಲಕಿ ಹೊಟ್ಟೆಯಲ್ಲಿ ಐದು ತಿಂಗಳ ಭ್ರೂಣ ಇರುವುದು ಕಂಡುಬಂತು. ಇನ್ನೊಮ್ಮೆ ಪರಿಶೀಲಿಸಿದಾಗ ಆ ಭ್ರೂಣಕ್ಕೆ ಆಗಲೇ 23 ವಾರ ಪೂರ್ಣಗೊಂಡಿರುವುದು ಗೊತ್ತಾಯಿತು. ಬಳಿಕ 2018ರ ನ.14ರಂದು ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿತ್ತು. ಆನಂತರ ಬಾಲಕಿ ಇನ್ನೂ ಚಿಕ್ಕವಯಸ್ಸಿನವಳಾಗಿರುವುದರಿಂದ ಆಕೆ ಮಗುವನ್ನು ಹೊರುವ ಸಾಮರ್ಥ್ಯವಿಲ್ಲವೆಂದು ಆಕೆಯ ಮನೆಯವರು ಭ್ರೂಣವನ್ನು ತೆಗೆಯುವಂತೆ ವೈದ್ಯರಲ್ಲಿ ಮನವಿ ಮಾಡಿದರು. ಆದರೆ, ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ ಕಾಯಿದೆ 1971ರ ಪ್ರಕಾರ ಭ್ರೂಣಕ್ಕೆ 20 ವಾರ ಪೂರ್ಣಗೊಂಡ ಬಳಿಕ ಅದನ್ನು ತೆಗೆಯುವ ಅವಕಾಶವಿಲ್ಲವೆಂದು ವೈದ್ಯರು ಹೇಳಿದ್ದರು.







