ರಾಬರ್ಟ್ ವಾದ್ರಾ ರಾಜಕೀಯ ಪ್ರವೇಶ ?

ಹೊಸದಿಲ್ಲಿ, ಫೆ.24: ಜನತೆಗೆ ಸೇವೆ ಸಲ್ಲಿಸಲು ಇನ್ನಷ್ಟು ವಿಸ್ತೃತ ಪಾತ್ರ ವಹಿಸುವ ಬಗ್ಗೆ ತಾನು ಮುಕ್ತನಾಗಿದ್ದೇನೆ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯ ಅಳಿಯ ರಾಬರ್ಟ್ ವಾದ್ರಾ ರಾಜಕೀಯ ಪ್ರವೇಶದ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದಾರೆ.
ದೇಶದ ವಿವಿಧೆಡೆ , ಅದರಲ್ಲೂ ಮುಖ್ಯವಾಗಿ ಉತ್ತರಪ್ರದೇಶದಲ್ಲಿ, ಕಾರ್ಯ ನಿರ್ವಹಿಸಿದಾಗ ಅಥವಾ ಪ್ರಚಾರ ಕಾರ್ಯಕ್ಕೆ ಜತೆ ನೀಡಿದಾಗ, ಜನತೆಗಾಗಿ ಇನ್ನಷ್ಟು ಹೆಚ್ಚಿನ ಸೇವೆ ಸಲ್ಲಿಸುವ ಸಾಧ್ಯತೆಯ ಬಗ್ಗೆ ಮತ್ತು ನನ್ನಲ್ಲಿ ಸಾಧ್ಯವಿರುವ ಸ್ವಲ್ಪಮಟ್ಟಿನ ಬದಲಾವಣೆ ಮಾಡಿಕೊಳ್ಳುವ ಯೋಚನೆ ಬಂದಿದೆ. ಜನತೆ ನೀಡಿದ ಅಪ್ಪಟ ಪ್ರೀತಿ, ಗೌರವ ಕಂಡು ನಾನು ವಿನೀತನಾಗಿದ್ದೇನೆ. ಹಲವಾರು ವರ್ಷಗಳಿಂದ ನಾನು ಪಡೆದಿರುವ ಅನುಭವ ಮತ್ತು ಗೌರವ ವ್ಯರ್ಥವಾಗಬಾರದು ಮತ್ತು ಇದನ್ನು ಒಳ್ಳೆಯ ಕಾರ್ಯಗಳಿಗೆ ಬಳಸಿಕೊಳ್ಳಲು ನಿರ್ಧರಿಸಿದ್ದೇನೆ. ನನ್ನ ಮೇಲಿರುವ ಆರೋಪ ಮತ್ತು ಆಪಾದನೆಯಿಂದ ಮುಕ್ತನಾದ ಬಳಿಕ ಜನತೆಯ ಸೇವೆಗಾಗಿ ಇನ್ನಷ್ಟು ಹೆಚ್ಚಿನ ಪಾತ್ರ ನಿರ್ವಹಿಸಲು ಬಯಸಿದ್ದೇನೆ ಎಂದವರು ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಳಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಾದ್ರಾ ‘‘ ದೇಶದ ಜನತೆಗೆ ಸಹಾಯ ಮಾಡಲು ರಾಜಕೀಯ ಸೇರಲೇಬೇಕು ಎಂದೇನಿಲ್ಲ. ಆದರೆ ನನ್ನ ರಾಜಕೀಯ ಪ್ರವೇಶ ಸಾಕಷ್ಟು ವ್ಯತ್ಯಾಸಗಳಿಗೆ ಕಾರಣವಾಗುವುದಾದರೆ ಯಾಕೆ ಆಗಬಾರದು. ಏನಿದ್ದರೂ ಈ ಬಗ್ಗೆ ಜನತೆ ನಿರ್ಧರಿಸಬೇಕು ಎಂದು ಹೇಳಿದರು.





