ಪಿಎಂ-ಕಿಸಾನ್ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ
1.01 ಕೋ.ರೈತರಿಗೆ ಮೊದಲ ಕಂತಿನಲ್ಲಿ ತಲಾ 2,000 ರೂ.

ಗೋರಖ್‌ಪುರ(ಉ.ಪ್ರ),ಫೆ.24: 1.01 ಕೋ.ರೈತರಿಗೆ ತಲಾ 2,000 ರೂ.ಗಳ ಮೊದಲ ಕಂತುಗಳನ್ನು ವರ್ಗಾವಣೆಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಇಲ್ಲಿ ಸರಕಾರದ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಗೆ ಚಾಲನೆ ನೀಡಿದರು.
ಪ್ರತಿಪಕ್ಷಗಳಿಗೆ 10 ವರ್ಷಗಳಿಗೊಮ್ಮೆ,ಚುನಾವಣೆಗಳಿಗೆ ಮುನ್ನ ರೈತರ ನೆನಪಾಗುತ್ತದೆ ಎಂದು ಅವರು ಇದೇ ವೇಳೆ ಆರೋಪಿಸಿದರು.
ಇಲ್ಲಿಯ ಎಫ್‌ಸಿಐ ಮೈದಾನದಲ್ಲಿ ಬಹಿರಂಗ ಸಭೆಯಲ್ಲಿ ತಲಾ 2,000 ರೂ.ಗಳ ವಿದ್ಯುನ್ಮಾನ ವರ್ಗಾವಣೆಗೆ ಚಾಲನೆ ನೀಡಿ ಮಾತನಾಡಿದ ಅವರು,ಯೋಜನೆಯಡಿ ಮೊದಲ ಕಂತನ್ನು 1.01 ಕೋ.ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ ಮತ್ತು ಈ ಹಂತದಲ್ಲಿ ಬಿಟ್ಟುಹೋದವರಿಗೆ ಶೀಘ್ರದಲ್ಲೇ ಲಭಿಸಲಿದೆ ಎಂದರು.
ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿವಿಧ ರಾಜ್ಯಗಳನ್ನು ಪ್ರತಿನಿಧಿಸಿದ್ದ ಆಯ್ದ ರೈತರ ಗುಂಪಿನೊಂದಿಗೆ ಸಂವಾದವನ್ನೂ ನಡೆಸಿದ ಮೋದಿ,ತನ್ನ ರಾಜಕೀಯ ಎದುರಾಳಿಗಳ ವಿರುದ್ಧ ತೀವ್ರ ದಾಳಿ ನಡೆಸಿದರು.
ಅವರಿಗೆ 10 ವರ್ಷಗಳಿಗೊಮ್ಮೆ,ಅದೂ ಚುನಾವಣೆಗಳಿಗೆ ಮುನ್ನ ರೈತರ ನೆನಪಾಗುತ್ತದೆ. ಅವರಿಗೆ ಸಾಲಮನ್ನಾದ ಜ್ವರವೇರುತ್ತದೆ ಮತ್ತು ಮತಗಳನ್ನು ಕ್ರೋಡೀಕರಿಸಲು ಅದನ್ನು ‘ಭಿಕ್ಷೆ’ಯಂತೆ ಹಂಚುತ್ತಾರೆ. ಈ ಬಾರಿ ಮೋದಿ ತಮ್ಮನ್ನು ಬಯಲಿಗೆಳೆಯುತ್ತಾರೆ ಎನ್ನುವುದು ಅವರಿಗೆ ಗೊತ್ತಿರಲಿಲ್ಲ ಎಂದ ಪ್ರಧಾನಿ,75,000 ಕೋ.ರೂ.ಗಳ ಎಂಪಿ-ಕಿಸಾನ್ ಯೋಜನೆಯು ಚುನಾವಣಾ ಭರವಸೆಯಲ್ಲ. ಮುಂಗಡಪತ್ರದಲ್ಲಿ ಹಣ ನಿಗದಿಯ ಬಳಿಕವೇ ತಾನು ಸಂಸತ್ತಿನಲ್ಲಿ ಈ ಯೋಜನೆಯ ಬಗ್ಗೆ ಮಾತನಾಡಿದ್ದೆ ಎಂದರು.
‘‘ಸಾಲ ಮನ್ನಾ ಸುಲಭವಾಗುತ್ತಿತ್ತು ಮತ್ತು ನಮಗೂ ಅನುಕೂಲಕರವಾಗುತ್ತಿತ್ತು. ರಾಜಕೀಯ ಮತ್ತು ಚುನಾವಣಾ ಲಾಭಗಳಿಗಾಗಿ ನಾವೂ ‘ಭಿಕ್ಷೆ’ಯನ್ನು ಹಂಚಬಹುದಿತ್ತು. ಆದರೆ ಅಂತಹ ಪಾಪವನ್ನು ನಾವು ಮಾಡುವುದಿಲ್ಲ.ಸಾಲ ಮನ್ನಾ ಆಯ್ದ ಕೆಲವೇ ಜನರಿಗೆ ಲಾಭಗಳನ್ನು ನೀಡುತ್ತದೆ ’’ ಎಂದರು.
ಯಾವುದೇ ಮೋಸ ಮತ್ತು ವದಂತಿಗಳ ಬಗ್ಗೆ ಎಚ್ಚರಿಕೆಯಿಂದಿರುವಂತೆ ರೈತರನ್ನು ಆಗ್ರಹಿಸಿದ ಅವರು,ಇದು ನಿಮ್ಮ ಹಣ ಮತ್ತು ಇದನ್ನು ವಾಪಸ್ ಪಡೆಯಲಾಗುವುದಿಲ್ಲ ಎಂದು ಒತ್ತಿ ಹೇಳಿದರು.
2022ರ ವೇಳೆಗೆ ತಮ್ಮ ಆದಾಯವನ್ನು ದುಪ್ಪಟ್ಟುಗೊಳಿಸಿಕೊಳ್ಳಲು ರೈತರಿಗೆ ನೆರವಾಗಲು ಸಾಧ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಒದಗಿಸಲು ತನ್ನ ಸರಕಾರವು ಸಂಪೂರ್ಣ ಪ್ರಾಮಾಣಿಕತೆಯಿಂದ ಶ್ರಮಿಸುತ್ತಿದೆ ಎಂದ ಅವರು, ಸರಕಾರವು ಫಲಾನುಭವಿಗಳಿಗೆ ರವಾನಿಸುತ್ತಿದ್ದ 100 ರೂ.ಗಳಲ್ಲಿ 85 ರೂ.ಮಧ್ಯವರ್ತಿಗಳ ಪಾಲಾಗುತ್ತಿದ್ದ ದಿನಗಳು ಕಳೆದುಹೋಗಿವೆ. ಈ ಯೋಜನೆಯಲ್ಲಿ ಮಧ್ಯವರ್ತಿಗಳಿಗೆ ಯಾವುದೇ ಪಾತ್ರವಿಲ್ಲ ಎಂದರು.
ಯೋಜನೆಯು ಲೋಪರಹಿತವಾಗಿದ್ದು,ಸಂಪೂರ್ಣ ಪಾರದರ್ಶಕತೆಯೊಂದಿಗೆ ಅನುಷ್ಠಾನಗೊಳ್ಳಲಿದೆ ಎಂದ ಮೋದಿ,ಅರ್ಹ ಫಲಾನುಭವಿಗಳ ಪಟ್ಟಿಯನ್ನು ಕೇಂದ್ರಕ್ಕೆ ಸಲ್ಲಿಸುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಿದರು.
ಪಿಎಂ-ಕಿಸಾನ್ ಯೋಜನೆಯಡಿ ಎರಡು ಹೆಕ್ಟೇರ್‌ವರೆಗೆ ಕೃಷಿಭೂಮಿಯನ್ನು ಹೊಂದಿರುವ 12 ಕೋಟಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಮೂರು ಕಂತುಗಳಲ್ಲಿ ವಾರ್ಷಿಕ 6,000 ರೂ.ಗಳ ಆರ್ಥಿಕ ನೆರವನ್ನು ಒದಗಿಸುವುದಾಗಿ ಕೇಂದ್ರವು 2019-20ನೇ ಸಾಲಿನ ಮಧ್ಯಂತರ ಮುಂಗಡಪತ್ರದಲ್ಲಿ ಪ್ರಕಟಿಸಿತ್ತು.







