ಪುಲ್ವಾಮ ಘಟನೆಯ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಲಿ
ರಾಷ್ಟ್ರಪತಿಗೆ ನೌಕಾಸೇನೆ ಅಧಿಕಾರಿಯ ಪತ್ರ

“ಮಾಧ್ಯಮಗಳ ಯುದ್ಧೋನ್ಮಾದದ ವರ್ತನೆಗೆ ಬ್ರೇಕ್ ಹಾಕಿ”
ಹೊಸದಿಲ್ಲಿ, ಫೆ.24: ಪುಲ್ವಾಮದಲ್ಲಿ ಉಗ್ರರ ದಾಳಿಗೆ 40 ಯೋಧರು ಬಲಿಯಾದ ಹಿನ್ನೆಲೆಯಲ್ಲಿ ಜನತೆ ಆಕ್ರೋಶ ವ್ಯಕ್ತಪಡಿಸುವುದರಲ್ಲಿ ತಪ್ಪೇನಿಲ್ಲ. ಆದರೆ ದಾಳಿ ಘಟನೆಯ ಬಳಿಕದ ವ್ಯವಹಾರದಲ್ಲಿ ಸೂಕ್ಷ್ಮ ವಿವೇಚನೆ ಮತ್ತು ಸಂಯಮ ವಹಿಸುವ ಅಗತ್ಯವಿದೆ. ಅಲ್ಲದೆ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಿಂದ ಸ್ವತಂತ್ರ ತನಿಖೆ ನಡೆಸಬೇಕಿದೆ ಎಂದು ಭಾರತೀಯ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ರಾಮದಾಸ್ ಹೇಳಿದ್ದಾರೆ.
ಜೊತೆಗೆ, ಕೆಲವು ಟಿವಿ ವಾಹಿನಿಗಳು ಕಾಶ್ಮೀರದ ನಮ್ಮದೇ ಜನರ ವಿರುದ್ಧ ಯುದ್ಧೋನ್ಮಾದದ ಭಾವನೆಯನ್ನು ಪ್ರಚೋದಿಸುತ್ತಿರುವುದು ಖಂಡನಾರ್ಹ ಎಂದವರು ರಾಷ್ಟ್ರಪತಿ ರಾಮನಾಥ ಕೋವಿಂದ್‌ಗೆ ಬರೆದಿರುವ ಪತ್ರದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಭಾರತ ಮತ್ತು ಪಾಕಿಸ್ತಾನ ದೇಶಗಳೆರಡೂ ಪರಮಾಣು ಬಾಂಬ್ ಹೊಂದಿರುವ ದೇಶಗಳಾಗಿದೆ ಎಂಬುದನ್ನು ಉಲ್ಲೇಖಿಸಿರುವ ಅವರು, ನಾವೀಗ ಯುದ್ಧದ ಅಪಾಯ ಎದುರಿಸಲು ಸಮರ್ಥರಾಗಿಲ್ಲ ಎಂದಿದ್ದಾರೆ. ದೇಶದಲ್ಲಿ ಹಾಗೂ ಗಡಿಭಾಗದಲ್ಲಿ ಈಗ ಇರುವ ಪರಿಸ್ಥಿತಿ ಯುದ್ಧಕ್ಕೆ ಕಾರಣವಾಗದಂತೆ ಸಶಸ್ತ್ರ ಪಡೆಗಳ ಮಹಾ ದಂಡನಾಯಕರಾಗಿರುವ ರಾಷ್ಟ್ರಪತಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ ಈಗಿರುವ ಸ್ಥಿತಿ ಉಲ್ಬಣಿಸಿದರೆ ಈ ಪರಿಸ್ಥಿತಿ ಎರಡು ದೇಶಗಳೊಳಗಿನ ಸಂಘರ್ಷಕ್ಕಿಂತ ಮಿಗಿಲಾದ ರೂಪು ಪಡೆಯಬಹುದು ಎಂದು ನಮ್ಮ ನಾಯಕರಿಗೆ ತಿಳಿಹೇಳುವಂತೆ ಪತ್ರದಲ್ಲಿ ಕೋರಲಾಗಿದೆ.
ದೇಶದ ವ್ಯೂಹಾತ್ಮಕ ದೃಷ್ಟಿಯಲ್ಲಿ ಅತ್ಯಂತ ಮಹತ್ವದ್ದಾಗಿರುವ ಜಮ್ಮು- ಶ್ರೀನಗರ ಹೆದ್ದಾರಿಯಲ್ಲಿ ಈ ರೀತಿಯ ದಾಳಿ ನಡೆಯಬಾರದಿತ್ತು ಮತ್ತು ಇಂತಹ ದಾಳಿ ನಡೆಯುವ ಸಾಧ್ಯತೆಯ ಬಗ್ಗೆ ಮೊದಲೇ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು ಎಂದು ವರದಿಯಾಗಿದೆ. ಜೈಷೆ ಮುಹಮ್ಮದ್ ಗುಂಪು ಈ ದಾಳಿಯನ್ನು ಯೋಜಿಸಿದೆ ಎಂದು ವರದಿಯಾಗಿದೆ. ಆರ್‌ಡಿಎಕ್ಸ್ ತುಂಬಿಕೊಂಡಿದ್ದ ಕಾರೊಂದು ಸೇನಾ ಪಡೆಯ ವಾಹನದ ಸಾಲನ್ನು ಸೀಳಿಕೊಂಡು ಮುನ್ನುಗ್ಗಿ ಈ ರೀತಿಯ ಅನಾಹುತಕ್ಕೆ ಕಾರಣವಾದ ಘಟನೆಯ ಹಿನ್ನೆಲೆಯಲ್ಲಿ ಎಲ್ಲಿ ಭದ್ರತಾ ಲೋಪವಾಗಿದೆ ಎಂಬ ಪ್ರಶ್ನೆ ಮೂಡುವುದು ಸಹಜವೇ ಆಗಿದೆ. ಕಾಶ್ಮೀರ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಲು ಪ್ರಯತ್ನಿಸಬೇಕು ಮತ್ತು ಮಾತುಕತೆ ಪ್ರಕ್ರಿಯೆಯಲ್ಲಿ - ಜಮ್ಮು ಕಾಶ್ಮೀರದ ಜನತೆ, ಭಾರತ ಮತ್ತು ಪಾಕಿಸ್ತಾನ ಮೂರೂ ಪಾಲ್ಗೊಳ್ಳಬೇಕು. ಹಲವಾರು ದಶಕಗಳಿಂದ ಈ ಕುರಿತು ನಾನು ಹೇಳುತ್ತಾ ಬಂದಿದ್ದೇನೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ನಾವು ಹೇಳುತ್ತಾ ಬಂದಿದ್ದೇವೆ. ವಾಸ್ತವವಾಗಿ ನಾವು ಅಲ್ಲಿಯ ನಿವಾಸಿಗಳನ್ನು, ಅವರು ಜಮ್ಮುವಿನಲ್ಲಿರಲಿ, ಲಡಾಕ್‌ನಲ್ಲಿರಲಿ ಅಥವಾ ಶ್ರೀನಗರದಲ್ಲಿರಲಿ, ಸಮಾನ ಪ್ರಜೆಗಳೆಂದು ಪರಿಗಣಿಸಿದ್ದೇವೆಯೇ. ಅಲ್ಲಿನ ಯುವಜನತೆಯ ಮನದಲ್ಲಿ ಪ್ರತ್ಯೇಕತಾ ಭಾವನೆ ಬೆಳೆಯದಂತೆ ಮಾಡಲು ನಾವು ಪ್ರಯತ್ನಿಸಿದ್ದೇವೆಯೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು. ಕರ್ಥಾರ್‌ಪುರ ಕಾರಿಡಾರ್ ಯೋಜನೆಯ ವಿಷಯದಲ್ಲಿ ಉಭಯ ದೇಶಗಳೂ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಿರುವಾಗ ಗಡಿ ನಿಯಂತ್ರಣಾ ರೇಖೆಯ ವಿಷಯದಲ್ಲಿ , ಅಥವಾ ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ಇತರ ಹಲವು ವಿಷಯಗಳಲ್ಲಿ ಇದು ಯಾಕಾಗದು. ಕಾಶ್ಮೀರಕ್ಕೆ ಸಂಬಂಧಪಟ್ಟ ಯಾವುದೇ ಸಂಘಟನೆ, ಪಕ್ಷ ಅಥವಾ ವ್ಯಕ್ತಿಯೊಡನೆ ನಾವು ಮಾತುಕತೆಗೆ ಮುಕ್ತರಾಗಿದ್ದೇವೆ ಎಂಬ ಸಂದೇಶವನ್ನು ಎಷ್ಟು ಬೇಗ ನಾವು ಕಳುಹಿಸುತ್ತೇವೆಯೋ ಅಷ್ಟು ಶೀಘ್ರವಾಗಿ ಈ ಸಮಸ್ಯೆಯ ಪರಿಹಾರದೆಡೆಗೆ ಹೆಜ್ಜೆ ಇಟ್ಟಂತಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸ್ವಾತಂತ್ರ್ಯದ ಧ್ಯೇಯ, ಆಝಾದಿ ಅಥವಾ ಕಾಶ್ಮೀರದ ಸ್ವಾಯತ್ತೆಗಾಗಿ ಆದಿಲ್‌ನಂತಹ ಯುವಕ ತನ್ನನ್ನು ತಾನೇ ಸ್ಫೋಟಿಸಿಕೊಂಡು ಆತ್ಮಾಹುತಿಗೆ ಸಿದ್ಧನಾಗಿರುವುದು ಕಾಶ್ಮೀರದ ಯುಜನತೆಯಲ್ಲಿ ಇಂದಿನ ದಿನದಲ್ಲಿ ಇರುವ ಕ್ರೋಧದ ಮನಸ್ಥಿತಿ ಅಥವಾ ಪ್ರತ್ಯೇಕತಾವಾದಿ ಮನಸ್ಥಿತಿಗೆ ಉದಾಹರಣೆಯಾಗಿದೆ. ಎಷ್ಟೇ ಬಲಿಷ್ಟ ಸೇನಾ ಶಕ್ತಿ ಅಥವಾ ತೋಳ್ಬಲವಿದ್ದರೂ ಈ ಸ್ಥಿತಿಯನ್ನು ನಿವಾರಿಸಲು ಸಾಧ್ಯವಿಲ್ಲ. ಕೇವಲ ಮಾತುಕತೆಯಿಂದ ಮಾತ್ರ ಇದು ಸಾಧ್ಯ. ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಇನ್ನಷ್ಟು ವಿಳಂಬ ಮಾಡದೆ ತ್ವರಿತವಾಗಿ ಸರಕಾರ ಮಾತುಕತೆಗೆ ಮುಂದಾಗಬೇಕು. ಪುಲ್ವಾಮ ದಾಳಿಯ ಬಳಿಕ ದೇಶದ ಹಲವೆಡೆ ಕಾಶ್ಮೀರಿ ಯುವಕರು, ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ, ಗುಂಪಿನಿಂದ ಹಲ್ಲೆ , ಕಿರುಕುಳ, ಅಪಮಾನಗೊಳಿಸುವ ಘಟನೆ ನಡೆದಿದೆ. ಶೀಘ್ರದಲ್ಲೇ ದೇಶದೆಲ್ಲೆಡೆ ಇರುವ ಮುಸ್ಲಿಮರ ಮೇಲೆ ಆಕ್ರೋಶದ ಜ್ವಾಲೆ ಹಬ್ಬಬಹುದು. ಇಂತಹ ಘಟನೆಗಳಿಗೆ ಆಸ್ಪದ ನೀಡಬಾರದು. ಇದಕ್ಕೆ ಪರಿಹಾರ ಸೇನಾಶಕ್ತಿಯಲ್ಲಿ ಅಲ್ಲ, ರಾಜಕೀಯ ಇಚ್ಛಾಶಕ್ತಿಯಲ್ಲಿದೆ. ಭಿನ್ನಮತೀಯರು, ಪ್ರತ್ಯೇಕತಾವಾದಿಗಳನ್ನು ಒಳಗೊಂಡ ಕಾಶ್ಮೀರದ ಜನತೆ, ಭಾರತ ಸರಕಾರ ಹಾಗೂ ಪಾಕಿಸ್ತಾನ ಸರಕಾರದ ಮಧ್ಯೆ ನಡೆಯುವ ಪ್ರಾಮಾಣಿಕ ಮಾತುಕತೆಯಿಂದ ಸಮಸ್ಯೆಗೆ ಪರಿಹಾರ ಸಾಧ್ಯ. ಅಲ್ಲದೆ ಭಾರತವು ಬೇಷರತ್ತಾಗಿ ಕದನ ವಿರಾಮ ಘೋಷಿಸಿ , ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆ ತನಿಖೆ ನಡೆಸಬೇಕು. ಇದರಿಂದ ದಾಳಿಯ ಹಿಂದಿನ ಕಾರಣ ವಿಳಂಬವಿಲ್ಲದೆ ತಿಳಿಯುತ್ತದೆ. ನಿಷ್ಪಕ್ಷಪಾತ ಮತ್ತು ಸ್ವತಂತ್ರ ನ್ಯಾಯಾಂಗ ತನಿಖೆಯ ಅಗತ್ಯವಿದೆ.
ಸುಪ್ರೀಂಕೋರ್ಟ್‌ನ ನ್ಯಾಯಾಧೀಶರು ಒಳಗೊಂಡ ತನಿಖಾ ಸಮಿತಿಯನ್ನು ನೇಮಿಸಬೇಕು. ಆ ಬಳಿಕ ಶಾಂತಚಿತ್ತರಾಗಿ ನಿರ್ಧಾರ ಕೈಗೊಳ್ಳಬೇಕು ಎಂದವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಮಾಧ್ಯಮ ಸನ್ನಿ ಕೆಲವು ಟಿವಿ ವಾಹಿನಿಗಳ ನಿರೂಪಕರ ಭಾವೋದ್ರೇಕದ ವರ್ತನೆಗೆ ಮೊದಲು ಬ್ರೇಕ್ ಹಾಕಬೇಕಿದೆ. ಕಾಶ್ಮೀರದ ಸಮಸ್ಯೆ ಇತ್ಯರ್ಥಕ್ಕೆ ಯುದ್ಧವೊಂದೇ ಪರಿಹಾರ ಎಂಬಂತೆ ಟಿವಿ ವಾಹಿನಿಗಳು ಬಿಂಬಿಸುತ್ತಿವೆ. ಇಂತಹ ಮಾಧ್ಯಮ ಸನ್ನಿಯಿಂದ ದೇಶದ ಜನತೆಯ ಮನಸ್ಸಿನ ಮೇಲಾಗುವ ಪರಿಣಾಮವನ್ನು ಅವರು ಊಹಿಸಿದ್ದಾರೆಯೇ ಎಂದು ರಾಮದಾಸ್ ಪ್ರಶ್ನಿಸಿದ್ದಾರೆ. ಅಲ್ಲದೆ ಕೆಲವೊಂದು ಮಾಧ್ಯಮಗಳು ಭಯೋತ್ಪಾದಕರ ದಾಳಿಗೆ ಕಾಶ್ಮೀರದ ಯುವಜನತೆ ಕಾರಣ ಎಂಬಂತೆ ಬಿಂಬಿಸಿದ ಪರಿಣಾಮ ಹಲವೆಡೆ ಅಮಾಯಕ ಕಾಶ್ಮೀರಿಗಳ ಮೇಲೆ ಹಲ್ಲೆ ನಡೆದಿದೆ. ಕಾಶ್ಮೀರ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅಡ್ಡಿಯಾಗಿದೆ. ಹೀಗೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ತಕ್ಷಣ ಘೋಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.







