ಅಕ್ರಮ ಬಾಂಗ್ಲಾದೇಶಿಗಳ ಅಸ್ಸಾಂ ಪ್ರವೇಶವನ್ನು ನಿಲ್ಲಿಸಿದ್ದು ಎನ್‌ಆರ್‌ಸಿಯ ಅತಿದೊಡ್ಡ ಯಶಸ್ಸು: ರಾಜ್ಯಪಾಲ ಮುಖಿ

ಹೊಸದಿಲ್ಲಿ,ಫೆ.24: ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಗುರುತಿಸಲು ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್‌ಸಿ)ಯನ್ನು ಹೊರತಂದಿರುವುದರ ಪರಿಣಾಮವಾಗಿ ರಾಜ್ಯದಲ್ಲಿ ಅಕ್ರಮ ಬಾಂಗ್ಲಾದೇಶಿಗಳು ಹೊಸದಾಗಿ ನುಗ್ಗುವುದು ಸಂಪೂರ್ಣವಾಗಿ ನಿಂತಿದೆ ಎಂದು ಅಸ್ಸಾಂ ರಾಜ್ಯಪಾಲ ಜಗದೀಶ ಮುಖಿ ಅವರು ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು,ಬಾಂಗ್ಲಾದೇಶದಿಂದ ಯಾವುದೇ ಅಕ್ರಮ ವಲಸೆಯನ್ನು ತಡೆಯಲು ಆ ದೇಶದೊಂದಿಗಿನ ಅಸ್ಸಾಂ ಭೂಗಡಿಯನ್ನು ಸಂಪೂರ್ಣವಾಗಿ ಮುಚ್ಚಲು ಕೇಂದ್ರವು ತ್ವರಿತವಾಗಿ ಕಾರ್ಯಾಚರಿಸು ತ್ತಿದೆ ಮತ್ತು ಗಡಿಯಲ್ಲಿನ ನದಿಭಾಗವನ್ನು ವಿದ್ಯುನ್ಮಾನ ಕಣ್ಗಾವಲಿಗೊಳಪಡಿಸಲಾಗುವುದು ಎಂದು ತಿಳಿಸಿದರು.
ಎನ್‌ಆರ್‌ಸಿಯಿಂದಾಗಿ ಬಾಂಗ್ಲಾದೇಶದಿಂದ ಅಕ್ರಮ ವಲಸೆಯು ಸಂಪೂರ್ಣವಾಗಿ ನಿಂತಿದೆ. ಇದು ಎನ್‌ಆರ್‌ಸಿ ಪ್ರಕ್ರಿಯೆಯ ಬಹುದೊಡ್ಡ ಸಾಧನೆಯಾಗಿದೆ. ಅಸ್ಸಾಮಿನಲ್ಲಿ ವಾಸವಾಗಿರುವ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಸರಕಾರವು ಬದ್ಧವಾಗಿದೆ ಎಂದರು.
ಅಸ್ಸಾಮಿನ ಎಲ್ಲ ಮೂಲನಿವಾಸಿ ಸಮುದಾಯಗಳ ಹಿತಾಸಕ್ತಿಗಳನ್ನು ರಕ್ಷಿಸಲು ಕೇಂದ್ರವು ಸಂಪೂರ್ಣವಾಗಿ ಬದ್ಧವಾಗಿದೆ ಎಂದೂ ಮುಖಿ ತಿಳಿಸಿದರು. ಢಾಕಾದೊಂದಿಗಿನ ಮೋದಿ ಸರಕಾರದ ನಿಕಟ ಸಂಬಂಧ ಮತ್ತು ಬಾಂಗ್ಲಾದೇಶದ ಆರ್ಥಿಕ ಅಭಿವೃದ್ಧಿ ಇವೂ ಬಾಂಗ್ಲಾದೇಶಿಗಳು ಅಕ್ರಮವಾಗಿ ಅಸ್ಸಾಮಿಗೆ ಬರದಿರಲು ಕಾರಣಗಳಾಗಿವೆ ಎಂದರು.







