ಸಮಾಜ ಕಟ್ಟುವ ಸಾಹಿತ್ಯ ಅಗತ್ಯವಿದೆ: ನಿವೃತ್ತ ನ್ಯಾ.ಎನ್.ಕುಮಾರ್

ಬೆಂಗಳೂರು, ಫೆ.24: ಕನ್ನಡದಲ್ಲಿ ಸಮಾಜವನ್ನು ಕಟ್ಟುವ ಸಾಹಿತ್ಯ ಕೊರತೆಯಿದೆ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ವಾಡಿಯಾ ಸಭಾಂಗಣದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ ವೆಂಕಟೇಶ ಅವರ ‘ಲೋಕದ ಬೆಡಗು’ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜವನ್ನು ಕಟ್ಟುವ ಸಾಹಿತ್ಯ, ಕೃತಿಗಳು ಸೃಷ್ಟಿ ಮಾಡುವವರ ಕೊರತೆ ನಮ್ಮಲ್ಲಿದೆ. ಎಲ್ಲ ಮಹನೀಯರು ಧರ್ಮದ ಬಗ್ಗೆ ಮಾತನಾಡುತ್ತಾರೆ. ಅನುಕೂಲಕ್ಕೆ ತಕ್ಕಂತೆ ಜಾತಿಯನ್ನು ತಂದು ಸಮಾಜವನ್ನು ಬೈಯುವುದು, ಧರ್ಮವನ್ನು ಬೈಯುವುದು ಹೆಚ್ಚಾಗಿದೆ. ಇದು ನಿಲ್ಲಬೇಕು ಎಂದು ಹೇಳಿದರು.
ಶತಾವಧಾನಿ ಡಾ.ಆರ್.ಗಣೇಶ ಮಾತನಾಡಿ, ಆಧ್ಯಾತ್ಮಿಕ ಲೇಪನ ಎಲ್ಲಡೆ ಇದೆ. ಭಾರತದ ಜ್ಞಾನ ಪರಂಪರೆ ಬಗ್ಗೆ ಬೇರೆ ಬೇರೆ ಭಾಷೆಯಲ್ಲಿ ಉಲ್ಲೇಖಿಸಲಾಗಿದೆ. ಅವಧೂತರ ಬೆಡಗು ಮೂಡಿಸುವ ಅಂಶಗಳು ಪ್ರೊ.ಮಲ್ಲೇಪುರಂ ಅವರ ಲೋಕದ ಬೆಡಗು ಪುಸ್ತಕದಲ್ಲಿದೆ. ಸಂಸ್ಕೃತದ ನಾನಾ ಪ್ರಕಾರಗಳಲ್ಲಿ ಪ್ರಬುದ್ಧತೆ ಹಾಗೂ ಉಪನಿಷತ್ತು ಕಥೆಗಳನ್ನು ಆಧರಿಸಿ ಉನ್ನತಮಟ್ಟದಲ್ಲಿ ಈ ಪುಸ್ತಕ ರಚಿಸಿರುವ ಮಲ್ಲೇಪುರಂ ಅವರ ಪ್ರಯತ್ನ ಪ್ರಶಂಸನೀಯ ಎಂದು ಶ್ಲಾಘಿಸಿದರು.
ಕರ್ನಾಟಕ ಗಾಂಧಿ ಸ್ಮಾರಕನಿಧಿ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಮಾತನಾಡಿ, ದೇಶದ ದೊಡ್ಡ ಶಕ್ತಿ ಆಧ್ಯಾತ್ಮಿಕ. ಅದನ್ನು ನಾವು ಮರೆಯುತ್ತಿದ್ದೇವೆ. ವಿದ್ಯಾರ್ಥಿಗಳ ಚಾರಿತ್ರ್ಯ ನಿರ್ಮಾಣ ಮಾಡುವ ಆಧ್ಯಾತ್ಮಿಕ ಶೂನ್ಯವಾಗಿದೆ. ಇಂದಿನ ಯುವ ಪೀಳಿಗೆ ಆಧ್ಯಾತ್ಮಿಕ ಒಲವು ತೋರಬೇಕು ಎಂದು ಹೇಳಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, ಓದುಗರ ಪ್ರೇಮ ನನ್ನನ್ನು ಶ್ರೀಮಂತಗೊಳಿಸಿದೆ. ಪ್ರತಿಯೊಂದು ಕ್ಷೇತ್ರದ ಮಹಿಮೆ ಅಲ್ಲಿನ ಮಹಾ ದಾರ್ಶನಿಕ ಶಕ್ತಿ ಪ್ರಧಾನ್ಯ ಬಗ್ಗೆ ನಾನು ಲೇಖನದ ಮೂಲಕ ತಿಳಿಸಿದ್ದೇನೆ. ಎಲ್ಲರ ಸಹಕಾರದಿಂದಲೇ ಈ ಗ್ರಂಥ ರೂಪುಗೊಂಡಿರುವುದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ವಿದ್ವಾಂಸ ಡಾ.ಕೆ.ಜಿ.ಸುಬ್ರಾಯ ಶರ್ಮ,ಅರವಿಂದೋ ಸೊಸೈಟಿ ಅಧ್ಯಕ್ಷ ಡಾ.ಅಜಿತ್ ಸಬ್ನೀಸ್, ಚಳ್ಳಕೆರೆ ಕೆಂಚಾವಧೂತ ಮಠ ವ್ಯವಸ್ಥಾಪಕ ಕೆಂಚಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







