ಜೆಡಿಎಸ್ ಮುಖಂಡರಿಗೆ ಜನರ ಹಿತಕ್ಕಿಂತ ಅಧಿಕಾರ ಮುಖ್ಯ: ಶಾಸಕ ಎಲ್.ನಾಗೇಂದ್ರ

ಮೈಸೂರು,ಫೆ.24: ಜೆಡಿಎಸ್ ಪಕ್ಷದವರಿಗೆ ರಾಜ್ಯದ ಜನರ ಹಿತಕ್ಕಿಂತ ಅಧಿಕಾರ ಮುಖ್ಯ. ಅದಕ್ಕಾಗಿ ಯಾರೊಂದಿಗೆ ಬೇಕಾದರೂ ಮೈತ್ರಿ ಮಾಡಿಕೊಳ್ಳುತ್ತಾರೆ ಎಂದು ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್.ನಾಗೇಂದ್ರ ಕಿಡಿಕಾರಿದರು.
ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ಜಿಲ್ಲಾಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ನಾವು ಜೆಡಿಎಸ್ ಪಕ್ಷದವರೊಂದಿಗೆ ಕೈ ಜೋಡಿಸುತ್ತೇವೆ ಎಂದು ಅವರನ್ನು ಕೇಳಿರಲಿಲ್ಲ. ಅವರೇ ನಮ್ಮ ಬಳಿ ಬಂದು ಒಪ್ಪಂದ ಮಾಡಿಕೊಂಡು ಅಧಿಕಾರ ನಡೆಸೋಣ ಎಂದಿದ್ದರು. ಅದರಂತೆ ನಾವು ಅವರಿಗೆ ಬೆಂಬಲ ನೀಡಿದ್ದೆವು. ಅವರಿಗೆ ಜನರ ಹಿತಕ್ಕಿಂತ ಅಧಿಕಾರ ಮುಖ್ಯ. ಹಾಗಾಗಿ ಯಾರೊಂದಿಗೆ ಬೇಕಾದರು ಮೈತ್ರಿ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.
ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡರು ಅಧಿಕಾರಕ್ಕಾಗಿ ಯಾರ ಜೊತೆಗಾದರು ಹೋಗುತ್ತಾರೆ. ಅವರಿಗೆ ರಾಜ್ಯದ ಜನರ ಹಿತ ಮುಖ್ಯ ಅಲ್ಲ, ಅವರಿಗೆ ಅಧಿಕಾರ ಮುಖ್ಯ, ಅಧಿಕಾರ ಸಿಗುತ್ತದೆ ಎಂದರೆ ಯಾರೊಂದಿಗೆ ಬೇಕಾದರು ಹೋಗುತ್ತಾರೆ. ಈ ಹಿಂದೆ ಅವರು ನಡೆದುಕೊಂಡಿರುವುದೇ ಸಾಕ್ಷಿ ಎಂದು ಹೇಳಿದರು.





