ಬಂಡೀಪುರ ಅಭಯಾರಣ್ಯದ ಕಾಡ್ಗಿಚ್ಚು ನಂದಿಸಲು ಮೈಸೂರಿನಿಂದ 30 ನೌಕರರ ರವಾನೆ: ಡಿಸಿಎಫ್ ಪ್ರಶಾಂತ್
ಮೈಸೂರು,ಫೆ.24: ಬಂಡೀಪುರ ವಲಯ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚು ನಂದಿಸಲು ಮೈಸೂರು ವಿಭಾಗದಿಂದ 30 ಜನ ನುರಿತ ನೌಕರರನ್ನು ಕಳುಹಿಸಲಾಗಿದೆ ಎಂದು ಮೈಸೂರು ವಲಯ ಅರಣ್ಯ ಉಪಸಂರಕ್ಷಣಾಧಿಕಾರಿ ಪ್ರಶಾಂತ್ ತಿಳಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಣಿಸಿಕೊಂಡಿರುವ ಬೆಂಕಿ ದಿನೇ ದಿನೇ ವ್ಯಾಪಿಸುತ್ತಿದ್ದು, ಸಾಕಷ್ಟು ಅರಣ್ಯ ನಾಶವಾಗಿದೆ. ಈ ಬೆಂಕಿಯನ್ನು ನಂದಿಸಲು ಸಾಕಷ್ಟು ಸಿಬ್ಬಂದಿಗಳು ಮತ್ತು ವಾಲೆಂಟಿಯರ್ಸ್ ಕೆಲಸ ಮಾಡುತ್ತಿದ್ದು, ಆದರೂ ಬೆಂಕಿಯ ಕೆನ್ನಾಲಿಗೆಗೆ ಜ್ವಾಲಮುಖಿಯಂತೆ ಉರಿಯುತ್ತಿದೆ. ಹಾಗಾಗಿ ಮೈಸೂರು ವಲಯದಿಂದ 30 ಜನರನ್ನು ಕಳಹಿಸಲಾಗಿದೆ ಎಂದು ಹೇಳಿದರು.
ಬೆಂಕಿಯನ್ನು ಉದ್ದೇಶ ಪೂರ್ವಕವಾಗಿ ಯಾರೋ ಹಚ್ಚಿರಬಹುದು ಎಂಬ ಅನುಮಾನ ಮೂಡುತ್ತಿದೆ. ಕಾರಣ ಅರಣ್ಯ ಪ್ರದೇಶದಲ್ಲಿ ಬೇಸಿಗೆ ಸಮಯದಲ್ಲಿ ಬೆಂಕಿ ಹತ್ತಿಕೊಂಡರೆ ತಕ್ಷಣ ಅದನ್ನು ನಿಯಂತ್ರಿಸಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಂಡಿರುತ್ತದೆ. ಒಣ ಎಲೆಗಳನ್ನು ಒಂದು ಕಡೆ ಸೇರಿಸಿ ಅದನ್ನು ಒಂದು ಟನ್ ರೀತಿ ಗೂಡ್ಸ್ ವಾಹನಗಳಲ್ಲಿ ಒಂದು ಕಡೆಗೆ ಸಾಗಿಸಲಾಗಿರುತ್ತದೆ. ಆದರೂ ಇಷ್ಟೊಂದು ಬೆಂಕಿ ಹೇಗೆ ಹಬ್ಬಿತು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ ಎಂದರು.
ಕೆಲವು ಮಂದಿ ಕಾಡಿನಲ್ಲಿ ನಡೆಸಬಹುದಾದ ಕಳ್ಳತನವನ್ನು ಮಾಡಲು ಸಾಧ್ಯವಾಗದಿದ್ದಾಗ ಇಂತಹ ಕೃತ್ಯವನ್ನು ಮಾಡಿರಬಹುದು ಎಂಬ ಅನುಮಾನ ಬರುತ್ತಿದೆ. ಬೆಂಕಿ ನಂದಿಸಲು ಅರಣ್ಯ ಇಲಾಖೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಸರ್ಕಾರದ ಎನ್.ಆರ್.ಎಫ್ ತಂಡದ ಅಗತ್ಯವಿಲ್ಲ, ಒಂದು ವೇಳೆ ಅಗತ್ಯ ಬಿದ್ದರೆ ಅದರ ಉಪಯೋಗವನ್ನು ಪಡೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.







