ಬರವಣಿಗೆಯು ಶೋಷಕ ಜಾತಿವಾದಿ ಶಕ್ತಿಗಳಲ್ಲಿ ಭೀತಿ ಹುಟ್ಟಿಸುತ್ತದೆ: ಕಾಂಚ ಐಲಯ್ಯ

ಹೊಸದಿಲ್ಲಿ,ಫೆ.24: ಬರವಣಿಗೆಯು ಶೋಷಕ ಜಾತಿವಾದಿ ಶಕ್ತಿಗಳಲ್ಲಿ ಭೀತಿಯನ್ನು ಹುಟ್ಟಿಸುವ ಏಕೈಕ ಮಾಧ್ಯಮವಾಗಿದೆ ಮತ್ತು ಅದು ಶೋಷಿತ ದಲಿತ ಬಹುಜನರ ಸ್ಥಿತಿಗಳನ್ನು ಬದಲಿಸಬಲ್ಲುದು ಎನ್ನುವುದು ಸಾಮಾಜಿಕ ಹೋರಾಟಗಾರ ಕಾಂಚ ಐಲಯ್ಯ ಶೆಪರ್ಡ್ ಅವರ ನಂಬಿಕೆಯಾಗಿದೆ.
ಸೇಜ್ ಪಬ್ಲಿಕೇಷನ್ಸ್ ಪ್ರಕಟಿಸಿರುವ ತನ್ನ ಆತ್ಮಕತೆ ‘ಫ್ರಮ್ ಎ ಶೆಪರ್ಡ್ ಬಾಯ್ ಟು ಆ್ಯನ್ ಇಂಟಲೆಕ್ಚುವಲ್(ಕುರಿಗಾಹಿ ಬಾಲಕನಿಂದ ಬುದ್ಧಿಜೀವಿಯವರೆಗೆ)’ನಲ್ಲಿ ಈ ದಲಿತ ಲೇಖಕ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪುಸ್ತಕವು ಭಾರತದ ಹೆಚ್ಚಿನ ಜನರು ಶಿಕ್ಷಣ ಮತ್ತು ಘನತೆಗಾಗಿ ನಡೆಸುತ್ತಿರುವ ಹೋರಾಟಗಳ ಕುರಿತೂ ಚರ್ಚಿಸಿದೆ.
ಬ್ರಾಹ್ಮಣ-ಬನಿಯಾ ಜಾತಿಗಳ ಹಲವರು ತಮ್ಮ ಆತ್ಮಕಥೆಗಳಲ್ಲಿ ಇಂಗ್ಲೀಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ತಮ್ಮ ದೊಡ್ಡತನದ ಬಗ್ಗೆ ಬರೆದುಕೊಂಡಿದ್ದಾರೆ. ಆದರೆ ಕುರುಬ ಸಮುದಾಯದಲ್ಲಿ ಹುಟ್ಟಿ ಬೆಳೆದ ಒಬ್ಬನೇ ಒಬ್ಬ ವ್ಯಕ್ತಿ ಆತ್ಮಕಥೆಯನ್ನು ಬರೆದಿರುವುದನ್ನು ತಾನು ನೋಡಿಲ್ಲ ಎಂದಿರುವ ಐಲಯ್ಯ,ಬರವಣಿಗೆಯು ಶೋಷಿತ ದಲಿತ ಬಹುಜನರ ಸ್ಥಿತಿಗಳನ್ನು ಸುಧಾರಿಸಬಲ್ಲ ಏಕೈಕ ಮಾಧ್ಯಮವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಬಳಿಕ ತಾನು ಈ ಕೆಲಸವನ್ನು ಕೈಗೆತ್ತಿಕೊಂಡಿದ್ದು,ಪೀಳಿಗೆಯ ನಂತರ ಪೀಳಿಗೆಯಂತೆ ನಿರಂತರ ನೆಲೆಯಲ್ಲಿ ಈ ಬರವಣಿಗೆ ನಡೆಯಬೇಕಿದೆ ಎಂದಿದ್ದಾರೆ.
ಇಂತಹ ಬರವಣಿಗೆಯು ಶೋಷಕ ಜಾತಿವಾದಿ ಶಕ್ತಿಗಳಲ್ಲಿ ಭೀತಿಯನ್ನು ಹುಟ್ಟಿಸುತ್ತದೆ ಎನ್ನುವುದರಲ್ಲಿ ಶಂಕೆಯಿಲ್ಲ. ವರ್ಗ ಕೇಂದ್ರಿತ ಬದಲಾವಣೆಗಿಂತ ಜಾತಿ ಕೇಂದ್ರಿತ ಬದಲಾವಣೆಗೆ ಹೆಚ್ಚು ಪ್ರತಿರೋಧ ವ್ಯಕ್ತವಾಗುತ್ತದೆ ಎನ್ನುವುದು ತನ್ನ ಜೀವನದ ಅನುಭವವಾಗಿದೆ. ಜಾತಿ ಪ್ರಾಬಲ್ಯವು ಆ ಜಾತಿಗಳಲ್ಲಿ ಹುಟ್ಟಿದವರ ರಕ್ತದಲ್ಲಿ ಹರಿಯುತ್ತಿರುವುದು ಇದಕ್ಕೆ ಕಾರಣ. ಅದರಂತೆ ಜಾತಿ ಕೀಳರಿಮೆಯು ಶೋಷಿತ ಜಾತಿಗಳ ರಕ್ತದಲ್ಲಿ ಹರಿಯುತ್ತಿರುತ್ತದೆ. ವರ್ಗ ಕೀಳರಿಮೆಯನ್ನು ಸುಲಭವಾಗಿ ಮೀರಬಹುದು,ಆದರ ಜಾತಿ ಕೀಳರಿಮೆಯನ್ನಲ್ಲ. ಇದೇ ಕಾರಣದಿಂದ ಜಾತಿ ಸಂಘರ್ಷವು ವರ್ಗ ಸಂಘರ್ಷಕ್ಕಿಂತ ಹೆಚ್ಚು ಕಠಿಣವಾಗಿದೆ ಎಂದು ಅವರು ಹೇಳಿದ್ದಾರೆ.
ಐಲಯ್ಯ ಇತ್ತೀಚಿಗೆ ಮೌಲಾನಾ ಆಝಾದ್ ನ್ಯಾಷನಲ್ ಉರ್ದು ವಿವಿಯ ಸಾಮಾಜಿಕ ನೀತಿ ಕುರಿತ ಅಧ್ಯಯನ ಕೇಂದ್ರದ ನಿರ್ದೇಶಕ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಹಲವಾರು ಚಿಂತನಶೀಲ ಕೃತಿಗಳನ್ನು ಅವರು ರಚಿಸಿದ್ದಾರೆ.
ಐಲಯ್ಯ ಇತ್ತೀಚಿಗಷ್ಟೇ ಶೆಪರ್ಡ್ ಅನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದ್ದಾರೆ. 2016,ಮೇ ತಿಂಗಳಲ್ಲಿ ಎರಡು ತೆಲುಗು ಭಾಷಿಕ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣಗಳ ಬ್ರಾಹ್ಮಣ ಸಂಘಟನೆಗಳು ತನ್ನ ಮೇಲೆ ದಾಳಿ ನಡೆಸುವ ಬೆದರಿಕೆಯೊಡ್ಡಿದ ಬಳಿಕ ತಾನು ಈ ನಿರ್ಣಯ ತೆಗೆದುಕೊಂಡೆ ಎಂದು ಅವರು ಹೇಳಿದ್ದಾರೆ.







