ಮಂಗಳೂರು: ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ನಿಂದ ರಕ್ತದಾನ ಶಿಬಿರ

ಮಂಗಳೂರು, ಫೆ. 24: ಹೈಲ್ಯಾಂಡ್ ಇಸ್ಲಾಮಿಕ್ ಫೋರಂ (ಎಚ್‌ಐಎಫ್) ವತಿಯಿಂದ ನಗರದ ಫಳ್ನೀರ್‌ನಲ್ಲಿರುವ ಮಸ್ಜಿದುಲ್ ಇಹ್ಸಾನ್‌ನಲ್ಲಿ ರವಿವಾರ ರಕ್ತದಾನ ಶಿಬಿರ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬ್ಲಡ್ ಬ್ಯಾಂಕ್ ಅಧಿಕಾರಿ ಮತ್ತು ಪ್ಯಾಥಾಲಜಿ ಸಹಾಯಕ ಉಪನ್ಯಾಸಕ ಡಾ. ರಂಜಿತ್ ರಾವ್, ಮಸ್ಜಿದುಲ್ ಇಹ್ಸಾನ್ ನ ಇಮಾಮ್ ಮೌಲಾನಾ ಅಲ್ತಾಫ್, ಅಲ್ ಕಲಮ್ ಅರಬಿಕ್ ಅಕಾಡೆಮಿಯ ಪ್ರಾಂಶುಪಾಲ ಅಬ್ದುಲ್ ಮತೀನ್, ಎಚ್‌ಐಎಫ್ ಅಧ್ಯಕ್ಷ ಸಾಜಿದ್ ಎ.ಕೆ. ಉಪಸ್ಥಿತರಿದ್ದರು.
ಬಿಲಾಲ್ ರೈಫ್ ಅವರ ಕೀರತ್‌ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಮಾತನಾಡಿದ ಡಾ. ರಂಜಿತ್ ರಾವ್, ರಕ್ತದಾನದ ಉಪಯೋಗ ಮತ್ತು ಲಾಭದ ಬಗ್ಗೆ ವಿವರಿಸಿದರು.
ಭಾರತದಲ್ಲಿ ವಾರ್ಷಿಕ ಐದು ಕೋಟಿ ಯೂನಿಟ್ ರಕ್ತದ ಅಗತ್ಯವಿದೆ. ಆದರೆ ಕೇವಲ 2.5 ಕೋಟಿ ಯೂನಿಟ್ ಮಾತ್ರ ಲಭ್ಯವಾಗುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಶಿಬಿರದ ಮೊದಲ ದಾನಿಯಾಗಿ ಮಂಗಳೂರಿನ ಪ್ರದೀಪ್ ಕುಮಾರ್ ರಕ್ತದಾನ ಮಾಡಿದರು. ಒಟ್ಟಾರೆ 173 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಎಚ್‌ಐಎಫ್ ಪ್ರತಿ ಆರು ತಿಂಗಳಿಗೊಮ್ಮೆ ಫಳ್ನೀರ್‌ನ ಮಸ್ಜಿದುಲ್ ಇಹ್ಸಾನ್ ನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸುತ್ತಿದ್ದು, ಮಂಗಳೂರು ಮತ್ತು ಹೊರವಲಯದ ಎಲ್ಲ ಸಮುದಾಯದ ಜನರು ಇದರ ಲಾಭ ಪಡೆಯುತ್ತಾರೆ. ಕಾರ್ಯಕ್ರಮ ಸಂಚಾಲಕ ಮುಹಮ್ಮದ್ ರಿಝ್ವಾನ್ ಕಾರ್ಯಕ್ರಮವನ್ನು ನಿರೂಪಿಸಿ, ಅತಿಥಿಗಳನ್ನು ಸ್ವಾಗತಿಸಿದರು.























