ಕುಂಭಮೇಳದ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಪಾಕ್ ಸಂಸದನ ಜೊತೆ ಮೋದಿ ಮಾತುಕತೆ

ಇಮ್ರಾನ್ ಖಾನ್ ಜೊತೆ ರಮೇಶ್ ಕುಮಾರ್ ವಂಕ್ವಾನಿ
ಹೊಸದಿಲ್ಲಿ, ಫೆ.24: ಪಾಕಿಸ್ತಾನದ ಸಂಸದ ರಮೇಶ್ ಕುಮಾರ್ ವಂಕ್ವಾನಿ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರನ್ನು ಭೇಟಿ ಮಾಡಿದ್ದರು. ಬಳಿಕ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಜತೆ ಸುದೀರ್ಘ ಚರ್ಚೆ ನಡೆಸಿದರು.
ಪಾಕಿಸ್ತಾನದ ಆಡಳಿತಾರೂಢ ತೆಹ್ರಿಕ್ ಇ ಇನ್ಸಾಫ್ ಪಕ್ಷದ ಸಂಸದರಾಗಿರುವ ರಮೇಶ್, "ಪುಲ್ವಾಮ ಉಗ್ರರ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇಲ್ಲ ಎಂಬ ಬಗ್ಗೆ ಪ್ರಧಾನಿ ಹಾಗೂ ಸಚಿವರಿಗೆ ಮನವರಿಕೆ ಮಾಡಿದ್ದೇನೆ" ಎಂದು ಎಎನ್ಐಗೆ ತಿಳಿಸಿದರು. "ನಮಗೆ ಶಾಂತಿ ಬೇಕು; ನಾವು ಧನಾತ್ಮಕ ದಿಕ್ಕಿನಲ್ಲಿ ಹೆಜ್ಜೆ ಇಡಬೇಕಾಗಿದೆ" ಎಂದು ಅವರು ಹೇಳಿದರು.
ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯಿಂದ ಕುಂಭಮೇಳ ವೀಕ್ಷಣೆಗೆ ಆಹ್ವಾನಿತವಾಗಿದ್ದ ವಿದೇಶಿ ನಿಯೋಗದಲ್ಲಿ ವಂಕ್ವಾನಿ ಕೂಡಾ ಆಗಮಿಸಿದ್ದರು. ಪುಲ್ವಾಮ ದಾಳಿಯ ಹಿನ್ನೆಲೆಯಲ್ಲಿ ಹದಗೆಟ್ಟಿರುವ ಭಾರತ- ಪಾಕ್ ಸಂಬಂಧವನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆ ವಹಿಸಲು ತಾವು ನೆರವಾಗುವುದಾಗಿ ಅವರು ಸ್ಪಷ್ಟಪಡಿಸಿದರು. "ನಿಮಗೆ ಯಾವುದೇ ಸಂದೇಹಗಳಿದ್ದರೆ ನನ್ನ ಬಳಿ ಹೇಳಿ. ಅದನ್ನು ನಾನು ನಮ್ಮ ಸರ್ಕಾರದ ಜತೆ ಹಂಚಿಕೊಳ್ಳುತ್ತೇನೆ" ಎಂದು ವಂಕ್ವಾನಿ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.







