ಇಸ್ಟವಾನ್ ಪೆನಿಗೆ 50 ಮೀ.ರೈಫಲ್ ಬಂಗಾರ

ಹೊಸದಿಲ್ಲಿ, ಫೆ.24: ಭಾರತದ ಶೂಟರ್‌ಗಳು ಅರ್ಹತೆ ಗಳಿಸಲು ವಿಫಲವಾದ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನ ಪುರುಷರ 50 ಮೀ. ರೈಫಲ್ 3 ಪೊಸಿಶನ್ ವಿಭಾಗದಲ್ಲಿ ಹಂಗರಿಯ ಇಸ್ಟವಾನ್ ಪೆನಿ ರವಿವಾರ ಬಂಗಾರಕ್ಕೆ ಮುತ್ತಿಕ್ಕಿದ್ದಾರೆ.
ಇಲ್ಲಿಯ ಡಾ.ಕರ್ಣಿಸಿಂಗ್ ಶೂಟಿಂಗ್ ರೇಂಜ್‌ನಲ್ಲಿ 22 ವರ್ಷ ಪ್ರಾಯದ ಇಸ್ಟ್ ವಾನ್ 459.1ಅಂಕ ಗಳಿಸಿ ಚಿನ್ನಕ್ಕೆ ಗುರಿ ಇಟ್ಟರು.
459 ಅಂಕ ಗಳಿಸಿದ ರಶ್ಯದ ಸೆರ್ಜೆ ಕಮೆನ್‌ಸ್ಕಿ ಬೆಳ್ಳಿ ಪದಕ ಗಳಿಸಿದರು. 444.5 ಅಂಕ ಗಳಿಸಿದ ಇಟಲಿಯ ಮಾರ್ಕೊ ಡಿ ನಿಕೊಲೊ ಕಂಚಿನ ಪದಕ ಪಡೆದರು. ಈ ಮೂವರು ಪದಕ ವಿಜೇತರು ತಮ್ಮ ದೇಶಗಳಿಂದ ಒಲಿಂಪಿಕ್ಸ್ ಕೋಟಾದಲ್ಲಿ ಅರ್ಹತೆ ಗಿಟ್ಟಿಸಿದ್ದಾರೆ. ಈ ವಿಭಾಗದಲ್ಲಿ ಭಾರತ ತೀವ್ರ ನಿರಾಸೆ ಅನುಭವಿಸಿತು. ಆತಿಥೇಯ ದೇಶದ ಶೂಟರ್‌ಗಳಾದ ಪರುಲ್ ಕುಮಾರ್ ಹಾಗೂ ಸಂಜೀವ್ ರಾಜ್‌ಪೂತ್ ಫೈನಲ್‌ಗೆ ಅರ್ಹತೆ ಗಳಿಸಲು ವಿಫಲವಾದರು. ಅರ್ಹತಾ ಸುತ್ತಿನಲ್ಲಿ ಕುಮಾರ್ 22ನೇ ಸ್ಥಾನ ಪಡೆದರೆ ರಾಜ್‌ಪೂತ್ 25ನೇ ಸ್ಥಾನಕ್ಕೆ ತೃಪ್ತಿಪಟ್ಟರು.
Next Story





