ಬೆಂಕಿಕ್‌ಗೆ ದುಬೈ ಪ್ರಶಸ್ತಿ ಗರಿ
4ನೇ ರ್ಯಾಂಕಿನ ಕ್ವಿಟೋವಾಗೆ ನಿರಾಸೆ

ದುಬೈ, ಫೆ.24: ಪ್ರಶಸ್ತಿ ಬರವನ್ನು ನೀಗಿಸಿಕೊಂಡ ಸ್ವಿಟ್ಝರ್ಲೆಂಡ್‌ನ ಶ್ರೇಯಾಂಕರಹಿತ ಆಟಗಾರ್ತಿ ಬೆಲಿಂಡಾ ಬೆಂಕಿಕ್ ಶನಿವಾರ ದುಬೈ ಟೆನಿಸ್ ಟೂರ್ನಿಯನ್ನು ಗೆದ್ದು ಬೀಗಿದ್ದಾರೆ. ಶನಿವಾರ ರಾತ್ರಿ ನಡೆದ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಅವರು ಝೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾರನ್ನು 6-3, 1-6, 6-2 ಸೆಟ್‌ಗಳಿಂದ ಸೋಲಿಸಿದ್ದಾರೆ. ಇದು ಎರಡನೇ ಶ್ರೇಯಾಂಕದ ಕ್ವಿಟೋವಾ ವಿರುದ್ಧ 21 ವರ್ಷ ವಯಸ್ಸಿನ ಬೆಂಕಿಕ್ ಸಾಧಿಸಿದ ಮೊದಲ ಜಯವಾಗಿದೆ. ಕ್ವಿಟೋವಾ ಕಳೆದ ತಿಂಗಳು ನಡೆದ ಆಸ್ಟ್ರೇಲಿಯನ್ ಓಪನ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದಿದ್ದರು.
ಅಗ್ರ 10ರ ರ್ಯಾಂಕಿನೊಳಗಿನ ಆಟಗಾರ್ತಿಯರ ವಿರುದ್ಧ ಈ ವಾರದಲ್ಲಿ 4ನೇ ಬಾರಿ ಬೆಂಕಿಕ್ ಜಯದ ಮಹಲು ಕಟ್ಟಿದ್ದಾರೆ. ಈ ಹಿಂದಿನ ಸುತ್ತುಗಳಲ್ಲಿ ಅವರು, ಆರ್ಯನ್ ಸಬಾಲೆಂಕಾ, ಸಿಮೊನಾ ಹಾಲೆಪ್ ಹಾಗೂ ಎಲಿನಾ ಸ್ವಿಟೊಲಿನಾ ವಿರುದ್ಧ ಜಯದ ನಗು ಬೀರಿದ್ದರು.
ಪಂದ್ಯದಲ್ಲಿ ಲಯಕ್ಕೆ ಮರಳಲು ಕ್ವಿಟೋವಾ ಪರದಾಟ ನಡೆಸಿದರು. ಪ್ರಥಮ ಸೆಟ್‌ನಲ್ಲಿ ಅವರು ಅನಗತ್ಯ ತಪ್ಪುಗಳನ್ನು ಎಸಗಿದರು. ಹಿಂಗೈ ಹೊಡೆತಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಬೆಂಕಿಕ್ ವಿಶ್ವ ನಂ.4 ಆಟಗಾರ್ತಿಯ ವಿರುದ್ಧ ಮೊದಲ ಸೆಟ್‌ನ್ನು ತಮ್ಮದಾಗಿಸಿಕೊಂಡರು. ಎರಡನೇ ಸೆಟ್‌ನಲ್ಲಿ ಲಯ ಕಂಡುಕೊಂಡ ಕ್ವಿಟೋವಾ ಮೂರು ಬಾರಿ ಬೆಂಕಿಕ್‌ರ ಸರ್ವ್‌ಗಳನ್ನು ಮುರಿದರು. ಅಲ್ಲದೆ ಬಲಿಷ್ಠ ಮುಂಗೈ ಹೊಡೆತಗಳ ಮೂಲಕ ಸೆಟ್ ವಶಪಡಿಸಿಕೊಂಡರು. ಆದರೆ ಕೊನೆಯಲ್ಲಿ ಮಾನಸಿಕವಾಗಿ ಪಂದ್ಯ ಜಯಿಸಿದ ಬೆಂಕಿಕ್ ಸೆಟ್‌ನ್ನೂ ವಶಪಡಿಸಿಕೊಂಡು ಪ್ರಶಸ್ತಿಗೆ ಮುತ್ತಿಕ್ಕಿದರು. ಪಂದ್ಯ ಸುಮಾರು 1 ಗಂಟೆ 43 ನಿಮಿಷಗಳ ಕಾಲ ನಡೆಯಿತು.







