ಅಮೆರಿಕದಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿದ ತೇಜಸ್ವಿನ್

ಹೊಸದಿಲ್ಲಿ, ಫೆ.24: ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದ ಬಿಗ್12 ಕಾಲೇಜ್‌ಗೇಟ್ ಅಥ್ಲೆಟಿಕ್ ಕೂಟದಲ್ಲಿ ಭಾರತದ ತೇಜಸ್ವಿನ್ ಶಂಕರ್ ರಾಷ್ಟ್ರೀಯ ದಾಖಲೆಯನ್ನು ಸರಿಗಟ್ಟುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡರು.
ಕನ್‌ಸಾಸ್ ರಾಜ್ಯ ಯುನಿವರ್ಸಿಟಿಯನ್ನು ಪ್ರತಿನಿಧಿಸಿದ ಹೈಜಂಪ್ ಪಟು ತೇಜಸ್ವಿನ್ ತನ್ನ ಮೊದಲ ಪ್ರಯತ್ನದಲ್ಲಿ 2.28 ಮೀ. ದೂರಕ್ಕೆ ಜಿಗಿದು ಕಳೆದ ವರ್ಷ ಪಟಿಯಾಲದಲ್ಲಿ ನಡೆದ 22ನೇ ಆವೃತ್ತಿಯ ಫೆಡರೇಶನ್ ಕಪ್‌ನಲ್ಲಿ ನಿರ್ಮಿಸಿದ್ದ ತನ್ನದೇ ರಾಷ್ಟ್ರೀಯ ದಾಖಲೆಯನ್ನು ಸರಿಗಟ್ಟಿದರು.
ಕಳೆದ ವರ್ಷ ಟೆಕ್ಸಾಸ್‌ನಲ್ಲಿ ತೇಜಸ್ವಿನ್ ತನ್ನ ವೈಯಕ್ತಿಕ ಶ್ರೇಷ್ಠ ಪ್ರದರ್ಶನ (2.29 ಮೀ.) ನೀಡಿದ್ದರು. ತೇಜಸ್ವಿನ್ 2015ರ ಕಾಮನ್‌ವೆಲ್ತ್ ಯೂತ್ ಗೇಮ್ಸ್‌ನಲ್ಲಿ ಚಿನ್ನ ಹಾಗೂ 2016ರ ದಕ್ಷಿಣ ಏಶ್ಯ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. 2016ರಲ್ಲಿ ಕೊಯಮತ್ತೂರಿನಲ್ಲಿ ನಡೆದ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ 2.26 ಮೀ. ದೂರಕ್ಕೆ ಜಿಗಿದ ತೇಜಸ್ವಿನ್, ಹರಿ ಶಂಕರ್ ರಾಯ್ ಹೆಸರಲ್ಲಿದ್ದ 12 ವರ್ಷ ಹಳೆಯ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು.





