ಭಾರತಕ್ಕೆ 5 ಪದಕ ಖಚಿತ
ಮಕ್ರಾನ್ ಕಪ್ ಬಾಕ್ಸಿಂಗ್ ಟೂರ್ನಿ
ಹೊಸದಿಲ್ಲಿ, ಫೆ.24: ಕಾಮನ್‌ವೆಲ್ತ್ ಗೇಮ್ಸ್‌ನ ಬೆಳ್ಳಿ ಪದಕ ವಿಜೇತ ಬಾಕ್ಸರ್ ಸತೀಶ್‌ಕುಮಾರ್ ಹಾಗೂ ಇತರ ನಾಲ್ವರು ಭಾರತೀಯ ಸ್ಪರ್ಧಿಗಳು ಇರಾನ್‌ನ ಛಬಹಾರ್‌ನಲ್ಲಿ ನಡೆಯುತ್ತಿರುವ ಮಕ್ರಾನ್ ಕಪ್ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತಕ್ಕೆ 5 ಪದಕಗಳನ್ನು ಖಚಿತಪಡಿಸಿದ್ದಾರೆ.
ಮಾಜಿ ಏಶ್ಯನ್ ಗೇಮ್ಸ್ ಕಂಚು ವಿಜೇತ ಸತೀಶ್(+91 ಕೆ.ಜಿ.) ತಮ್ಮ ಎದುರಾಳಿ ತುರ್ಕಮೆನಿಸ್ತಾನ್‌ನ ಬೆಕಿ ತಾಯ್‌ಚೆಯ್ಯೆವ್ ಅವರನ್ನು 5-0 ಯಿಂದ ಮಣಿಸಿದರು. ಸತೀಶ್ ಸೆಮಿಫೈನಲ್‌ನಲ್ಲಿ ಎಮೆನ್ ರಮ್ಝಾನ್ ಅವರ ಸವಾಲಿಗೆ ಸಜ್ಜಾಗಲಿದ್ದಾರೆ.
ಸೆಮಿಫೈನಲ್ ತಲುಪಿದ ಇತರ ಭಾರತೀಯ ಬಾಕ್ಸ್ಸರ್‌ಗಳೆಂದರೆ ಮಂಜೀತ್ ಸಿಂಗ್ ಪಾಂಘಾಲ್(75 ಕೆ.ಜಿ.), ಸಂಜೀತ್(91 ಕೆ.ಜಿ), ಲಲಿತ್ ಪ್ರಸಾದ್(52 ಕೆ.ಜಿ.) ಹಾಗೂ ದೀಪಕ್(49 ಕೆ.ಜಿ.).
ಮಂಜೀತ್ ಅವರು ಇರಾಕ್‌ನ ಅಮೀರ್ ಮೊಹಸೆನ್ ಅವರಿಗೆ 5-0 ಯಿಂದ ಸೋಲುಣಿಸಿದರೆ, ಕಳೆದ ಬಾರಿಯ ಇಂಡಿಯಾ ಓಪನ್ ವಿಜೇತ ಸಂಜೀತ್ ಹಂಗರಿಯ ಆ್ಯಡಮ್ ಹಮೊರಿ ಅವರಿಗೆ ಸೋಲಿನ ಪಂಚ್ ನೀಡಿದರು. ಲಲಿತ್ ಪ್ರಸಾದ್ ಅವರು ಮೆಹದಿ ಹಬಿಬಿ ಅವರನ್ನು ಸುಲಭವಾಗಿ ಮಣಿಸಿದರೆ ಮತ್ತೊಂದೆಡೆ ದೀಪಕ್ ಅವರು ಬೈಗಿ ಮಿರ್ ಅವರನ್ನು ಸೋಲಿಸಿ ಉಪಾಂತ್ಯ ಪ್ರವೇಶಿಸಿದರು.







