ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಜ್ಜು: ಈಶ್ವರ್ ಖಂಡ್ರೆ

ಮಂಗಳೂರು, ಫೆ. 25: ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಜ್ಞಾಗಿದ್ದು, ಬಿಜೆಪಿಯನ್ನು ಸೋಲಿಸಿ, ಪಕ್ಷವನ್ನು ಗೆಲ್ಲಿಸುವ ಸಂಕಲ್ಪವನ್ನು ಕೆಪಿಸಿಸಿ ವತಿಯಿಂದ ಮಾಡಲಾಗಿದೆ ಎಂದು ಕೆಪಿಸಿಸಿ ಕಾಯಾರ್ಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಕಾರ್ಯಾಧ್ಯಕ್ಷರಾದ ಬಳಿಕ ಪ್ರಥಮ ಬಾರಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕೆಪಿಸಿಸಿ ವತಿಯಿಂದ 224 ಕ್ಷೇತ್ರಗಳಲ್ಲಿ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿ ಕ್ಷೇತ್ರಗಳೂ ಸೇರಿದಂತೆ ರಾಜ್ಯದ 56900 ಬೂತ್‌ಗಳಲ್ಲಿಯೂ ಮಾರ್ಚ್ 10ರೊಳಗೆ ಆಯಾ ವಾರ್ಡಿನ, ಬೂತ್ ಮಟ್ಟದ ಪದಾಧಿಕಾರಿಗಳಿಗೆ, ಸಮಿತಿ ಅಧ್ಯಕ್ಷರಿಗೆ ತರಬೇತಿ ನೀಡುವ ಶಿಬಿರ ನಡೆಯಲಿದೆ. ಜನ ಸಂಪರ್ಕ ಅಭಿಯಾನದ ಮೂಲಕ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಕಾಂಗ್ರೆಸ್‌ನ ಕೊಡುಗೆ ಹಾಗೂ ಸಾಧನೆಗಳ ಬಗ್ಗೆ, ಬಿಜೆಪಿ ನೇತೃತ್ವದ ಸರಕಾರದ ವೈಫಲ್ಯದ ಬಗ್ಗೆ ಮನೆ ಮನೆಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಆರಂಭವಾಗಿದೆ. ಇದರ ಜತೆಯಲ್ಲಿಯೇ ಜಿಲ್ಲಾ ಮಟ್ಟದ ಸಮಾವೇಶಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ನೇತೃತ್ವದ ಸರಕಾರ ಕಳೆದ ಐದು ವರ್ಷಗಳ ಆಡಳಿತಾವಧಿಯಲ್ಲಿ ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ವಿಫಲವಾಗುವ ಮೂಲಕ ವಚನಭ್ರಷ್ಟ್ರವಾಗಿದೆ. ಕಪ್ಪು ಹಣ ಹಾಗೂ ಭಯೋತ್ಪಾದನೆ ನಿಗ್ರಹಿಸುವಲ್ಲಿ ಸೋತಿದೆ. ಕಳೆದ ನಾಲ್ವೈತ್ತೈದು ವರ್ಷಗಳ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರಗೊಂಡಿದೆ. ರೈತರಿಗೆ ಪೂರಕವಾದ ಯಾವುದೇ ಕಾರ್ಯಕ್ರಮ ನೀಡಿಲ್ಲ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಲಾಗಿಲ್ಲ. ರಾಜ್ಯದಲ್ಲಿ ಅಪರೇಶನ್ ಕಮಲದ ಮೂಲಕ ಬಿಜೆಪಿ ಚುನಾವಣೆ ಮೂಲಕ ರಚನೆಯಾದ ಸರಕಾರವನ್ನು ಅಸ್ಥಿರಗೊಳಿಸಲು ಮಾಡಿದ ಕ್ರಮವು ಬಿಜೆಪಿಗೆ ಶಾಪವಾಗಿ ಪರಿಣಮಿಸಿದೆ. ಈ ಎಲ್ಲಾ ಅಂಶಗಳನ್ನು ಜನರ ಮುಂದಿಡಲಾಗುವುದು ಎಂದು ಅವರು ಹೇಳಿದರು.
ಮಾರ್ಚ್ 9ರಂದು ಹಾವೇರಿಗೆ ರಾಹುಲ್ ಗಾಂಧಿ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮಾರ್ಚ್ 9ರಂದು ಹಾವೇರಿಗೆ ಭೇಟಿ ನೀಡಲಿದ್ದು, ಪ್ರಿಯಾಂಕ ಗಾಂಧಿ ಅವರನ್ನೂ ರಾಜ್ಯಕ್ಕೆ ಭೇಟಿ ನೀಡುವಂತೆ ಕೆಪಿಸಿಸಿ ವತಿಯಿಂದ ಆಹ್ವಾನ ನೀಡಲಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಮಹಾ ಘಟ್‌ಬಂಧನ್‌ನಲ್ಲಿ ಅತ್ಯಧಿಕ ಸ್ಥಾನಗಳನ್ನು ಪಡೆಯುವ ಪಕ್ಷದ ನಾಯಕ ಪ್ರಧಾನಿ ಹುದ್ದೆಗೆ ಆಯ್ಕೆಯಾಗುತ್ತಾರೆ. ಕಾಂಗ್ರೆಸ್ ನಾಯಕನಾಗಿ ನಾನು ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿಸಲು ಬಯಸುತ್ತೇನೆ. ಈಗಾಗಲೇ ಚಂದ್ರಬಾಬು ನಾಯ್ಡು, ಹಾಗೂ ದೇವೇಗೌಡರು ಕೂಡಾ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪಿಗೆ ಸೂಚಿಸಿದ್ದಾರೆ. ರಾಹುಲ್ ಗಾಂಧಿಯವರು ಈಗಾಗಲೇ ದೇಶದ ಎಲ್ಲೆಡೆಗೆ ಸಂಚರಿಸಿ ಮೋದಿ ಸರಕಾರದ ವೈಫಲ್ಯಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯ ಮಾಡುತತಿದ್ದಾರೆ. ಜನರಿಂದಲೂ ಅವರು ಪ್ರಧಾನಿಯಾಗಬೇಕೆಂಬ ಅಪೇಕ್ಷೆ ವ್ಯಕ್ತವಾಗಿದೆ ಎಂದು ಈಶ್ವರ್ ಖಂಡ್ರೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಗೋಷ್ಠಿಯಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೋ, ಮುಖಂಡರಾದ ಹರೀಶ್ ಕುಮಾರ್, ಪದಾಧಿಕಾರಿಗಳಾದ ಎಸಿ ವಿನಯ ರಾಜ್, ಸದಾಶಿವ ಉಳ್ಳಾಲ್, ಜಿ.ಎ. ಬಾವ, ನವೀನ್ ಡಿಸೋಜಾ, ಪುರುಷೋತ್ತಮ ಚಿತ್ರಾಪುರ, ವಿಶ್ವಾಸ್ ಕುಮಾರ್ ದಾಸ್, ಮುರಳೀಧರ, ುರೇಂದ್ರ ಕಾಂಬ್ಳಿ ಉಪಸ್ಥಿತರಿದ್ದರು.
ಪುಲ್ವಾಮ ಘಟನೆ ಮೋದಿ ಸರಕಾರದ ವೈಫಲ್ಯ
ಪುಲ್ವಾಮ ಭಯೋತ್ಪಾದಕ ದಾಳಿಯಿಂದಾಗಿ ಅಮಾಯಕ ಮುಗ್ಧ ಯೋಧರು ಪ್ರಾಣ ತೆರುವಂತಾಗಿದೆ. ಈ ದಾಳಿಯ ಬಗ್ಗೆ ಗುಪ್ತಚರ ವರದಿ ನೀಡಲು ಸಾಧ್ಯವಾಗಿಲ್ಲದಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಸರಕಾರದ ವೈಫಲ್ಯ ಎಂದುಈಶ್ವರ್ ಖಂಡ್ರೆ ಆರೋಪಿಸಿದರು.
ಕೇಂದ್ರ ಸರಾರ ಪ್ರಚಾರದಲ್ಲೇ ನಿರತವಾಗಿದ್ದು, ಇತಿಹಾಸದಲ್ಲಿ ಇದೇ ಮೊದಲು ಎಂಬಂತೆ 5000 ಕೋಟಿ ರೂ.ಗಳನ್ನು ಪ್ರಚಾರಕ್ಕಾಗಿ ಖರ್ಚು ಮಾಡಿದೆ ಎಂದು ಆಕ್ಷೇಪಿಸಿದರು.
ದೇಶಕ್ಕಾಗಿ ತ್ಯಾಗ ಮನೋಭಾವದಿಂದ ಮೈತ್ರಿ
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಈಶ್ವರ್ ಖಂಡ್ರೆಯವರು ಉತ್ತರಿಸುತ್ತಾ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ದೇಶದ ಹಿತದೃಷ್ಟಿಯಿಂದ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿನಲ್ಲಿ ಮೈತ್ರಿ ಮಾಡಿಕೊಂಡಿದೆ. ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ತ್ಯಾಗ ಮನೋಭಾವದಿಂದ ಮಾಡಿಕೊಂಡ ಮೈತ್ರಿ ಇದಾಗಿದೆ. ವೈಯಕ್ತಿಕವಾಗಿ ಪಕ್ಷಕ್ಕಿಂತ ರಾಷ್ಟ್ರ ದೊಡ್ಡದು ಎಂಬ ನಿಟ್ಟಿನಲ್ಲಿ ಈ ಮೈತ್ರಿ ಮಾಡಲಾಗಿದೆ. ಹಾಗಾಗಿ ಸ್ಥಾನ ಹಂಚಿಕೆ ಕುರಿತು ಪ್ರತಮ ಹಂತದ ಮಾತುಕತೆ ಎರಡು ಪಕ್ಷಗಳ ಮುಖಂಡರ ನಡುವೆ ನಡೆದಿದೆ. ಶೀಘ್ರದಲ್ಲಿ ಮುಂದಿನ ಮಾತುಕತೆ ನಡೆಸಿ ವಾರದೊಳಗೆ ಹೊಸದಿಲ್ಲಿಯಲ್ಲಿ ಮುಖಂರ ಜತೆ ಚರ್ಚೆನಡೆಯಲಿದೆ ಎಂದರು.
ಪ್ರಾಥಮಿಕ ಹಂತದಲ್ಲಿ ರಾಜ್ಯದ ಯಾವ ಕ್ಷೇತ್ರಗಳಲ್ಲಿ ಯಾವ ಪಕ್ಷ ಪ್ರಾಬಲ್ಯ ಹೊಂದಿದೆಯೋ ಆ ಪಕ್ಷದ ಅಭ್ಯರ್ಥಿಗೆ ಸ್ಥಾನ ಬಿಟ್ಟುಕೊಡಲು ಚರ್ಚೆ ಆಗಿದೆ ಎಂದವರು ಹೇಳಿದರು.







