ಬೆಂಗರೆಯಲ್ಲಿ ಪಾಕಿಸ್ತಾನಕ್ಕೆ ಜೈಕಾರ ವದಂತಿ ಸಂಘಪರಿವಾರದ ಅಜೆಂಡಾ: ಎಸ್‌ಡಿಪಿಐ
ಮಂಗಳೂರು, ಫೆ. 25: ನಗರ ಸಮೀಪದ ಬೆಂಗರೆಯಲ್ಲಿ ಪಾಕಿಸ್ತಾನದ ಪರವಾಗಿ ಕಿಡಿಗೇಡಿಗಳು ಜೈಕಾರ ಕೂಗಿದ್ದಾರೆ ಎಂಬುದಾಗಿ ಕೆಲ ಮಾಧ್ಯಮಗಳು ಪ್ರಸಾರ ಮಾಡಿದ್ದು, ಇದು ಸತ್ಯಕ್ಕೆ ದೂರವಾಗಿದೆ. ಇದರ ಹಿಂದೆ ಸಂಘಪರಿವಾರದ ಅಜೆಂಡಾ ಅಡಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಬೆಂಗರೆ ವಾರ್ಡ್ ಅಧ್ಯಕ್ಷ ಶಾದಾಬ್ ಆರೋಪಿಸಿದ್ದಾರೆ.
‘ಬೆಂಗರೆಯಲ್ಲಿ ಪಾಕಿಸ್ತಾನಕ್ಕೆ ಜೈ ಕೂಗಿದ ಕಿಡಿಕೇಡಿಗಳು’ ಎಂಬ ಶೀರ್ಷಿಕೆ ಅಡಿಯಲ್ಲಿ ನಗರದ ಬೆಂಗರೆಯಲ್ಲಿ ‘ಪಾಕಿಸ್ತಾನಕ್ಕೆ ಜಿಂದಾಬಾದ್; ಮೋದಿಗೆ ಧಿಕ್ಕಾರ’ ಎಂದು ಮೂವರು ಕಿಡಿಕೇಡಿಗಳು ಬೊಬ್ಬೆ ಹಾಕುತ್ತಾ ದ್ವಿಚಕ್ರ ವಾಹನದಲ್ಲಿ ಕೂಗಾಡಿಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ಮಾಧ್ಯಮಗಳಿಗೆ ಕರೆ ಮಾಡಿ ಹೇಳಿದ್ದಾರೆ ಎಂದು ಮಾಧ್ಯಮದಲ್ಲಿ ಪ್ರಸಾರವಾಗಿದೆ. ಒಂದು ವೇಳೆ ಇಂತಹ ಘಟನೆ ನಡೆದಿದ್ದಲ್ಲಿ ಎಸ್‌ಡಿಪಿಐ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದರು.
ಈ ಬಗ್ಗೆ ಸಂಘಟನೆಯಿಂದ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ. ‘ಇಂತಹ ಯಾವುದೇ ಘಟನೆಗಳು ನಡೆದಿರುವುದು ನಮ್ಮ ಗಮನಕ್ಕೆ ಬಂದಿಲ್ಲ’ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.
ಇದು ಸಂಘ ಪರಿವಾರದ ವ್ಯವಸ್ಥಿತ ಷಢ್ಯಂತ್ರವಾಗಿದ್ದು, ಅವರೇ ಪಾಕಿಸ್ತಾನಕ್ಕೆ ಜೈ ಕೂಗಿ ಮುಸಲ್ಮಾನರನ್ನು ಆರೋಪಿ ಸ್ಥಾನದಲ್ಲಿ ಕೂರಿಸುವ ಭಾಗವಾಗಿದೆ. ವಿಜಯಪುರದ ಸಿಂಧಗಿಯಲ್ಲಿ ಪಾಕ್ ಧ್ವಜ, ಹುಬ್ಬಳ್ಳಿ ಕೋರ್ಟ್ ಆವರಣದಲ್ಲಿ ಬಾಂಬ್ ಸ್ಫೋಟ, ಇಂತಹ ಹಲವು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಬೆಂಗರೆಯಲ್ಲಿ ನಡೆದ ಘಟನೆಯು ಒಂದು ಸಮುದಾಯವನ್ನು ಭಯಭೀತಿಗೊಳಿಸುವ ಸಂಘಪರಿವಾರದ ಅಜೆಂಡಾದ ಭಾಗವಾಗಿದೆ ಎಂದು ಶಾದಾಬ್ ಪ್ರಕಟನೆಯಲ್ಲಿ ತಿಳಿಸಿದರು.







