ಉ.ಕ. ಸಮಗ್ರ ಅಭಿವೃದ್ಧಿಗಾಗಿ ಉತ್ತರ ಕರ್ನಾಟಕ ಪಕ್ಷ ಸ್ಥಾಪನೆ: ನಾಗೇಶ ಗೋಲಶೆಟ್ಟಿ
ಬೆಂಗಳೂರು, ಫೆ.25: ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಉತ್ತರ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ಉತ್ತರ ಕರ್ನಾಟಕ ಪಕ್ಷ ಸ್ಥಾಪನೆಗೆ ಫೆ.2ರಿಂದ 28ರವರೆಗೆ ರಾಜ್ಯಾದ್ಯಂತ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಣೆ ಅಭಿಯಾನ ಆರಂಭಿಸಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಏಕೀಕರಣವಾಗಿ 63 ವರ್ಷಗಳು ಕಳೆದರೂ ಉತ್ತರ ಕರ್ನಾಟಕದ ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ, ಉತ್ತರ ಕನ್ನಡ ಹಾಗೂ ಹಾವೇರಿ ಜಿಲ್ಲೆಗಳು ಅಭಿವೃದ್ಧಿ ಹೊಂದಲೇ ಇಲ್ಲ. ಇದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದು ಆರೋಪಿಸಿದರು.
ಕೃಷಿ, ಶಿಕ್ಷಣ, ನೀರಾವರಿ, ಸಾಹಿತ್ಯ, ಕಲೆ, ರಸ್ತೆ, ಸಾರಿಗೆ, ರೈಲು, ಉದ್ಯಮಗಳು ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕ ಬಹಳಷ್ಟು ಹಿಂದೆ ಉಳಿದಿದೆ. ರಾಜಕೀಯ ಧುರೀಣರ ಮಲತಾಯಿ ಧೋರಣೆಯಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತರ ಕರ್ನಾಟಕದ 96 ಶಾಸಕರು, 12 ಲೋಕಸಭಾ ಸದಸ್ಯರು, 22 ವಿಧಾನಸಭಾ ಸದಸ್ಯರು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಯಾವುದೇ ಶ್ರಮ ವಹಿಸಿಲ್ಲ. ಆದ್ದರಿಂದ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಹಾಗೂ ರಾಜಕೀಯ ಇಚ್ಛಾಶಕ್ತಿಗಾಗಿ ಉತ್ತರ ಕರ್ನಾಟಕ ಪಕ್ಷ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಫೆ.2 ರಿಂದ 28ರವರೆಗೆ ರಾಜ್ಯಾದ್ಯಂತ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಣೆ ಅಭಿಯಾನ ಆರಂಭಿಸಲಾಗಿದೆ ಎಂದರು.







