ಪಂಪ್‌ವೆಲ್ ಕೆಲಸ ಆಗದಿದ್ರೆ ಟೋಲ್‌ಗೇಟ್ ಒಡೆಸುತ್ತೇನೆ: ಸಂಸದ ನಳಿನ್ ಕುಮಾರ್
ದ.ಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ

ಮಂಗಳೂರು, ಫೆ. 25: ಹೆದ್ದಾರಿ ಸಮಸ್ಯೆ ಕುರಿತು ಕೇಂದ್ರ ಭೂಸಾರಿಗೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಸಭೆ ನಡೆಸಲಿದ್ದಾರೆ. ಅದಕ್ಕೆ ಮೊದಲು ಪಂಪ್‌ವೆಲ್ ಮೇಲ್ಸೇತುವೆಯ ಕೆಲವು ಕೆಲಸಗಳನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಟೋಲ್‌ಗೇಟ್ ಒಡೆದು ಹಾಕಿಸುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ದ.ಕ.ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪಂಪ್‌ವೆಲ್ ಫ್ಲೈಓವರ್ ಮುಗಿಯುವವರೆಗೂ ಜಂಕ್ಷನ್‌ನಲ್ಲಿ ಸಂಚಾರ ಸುಗಮವಾಗಿಸಲು ಸರಿಪಡಿಸಿಕೊಡಬೇಕು, ಇಲ್ಲವಾದರೆ ಗುತ್ತಿಗೆದಾರರಿಗೆ ಆದಾಯ ತರುವ ಟೋಲ್‌ಗೇಟ್ ಒಡೆಸುತ್ತೇನೆ, ಒಂದೋ ಗುತ್ತಿಗೆದಾರರು, ಇಲ್ಲ ನಾನು ಜೇಲಿಗೆ ಹೋಗಬೇಕಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಮೇಲ್ಸೇತುವೆಯ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಪುಂಪುವೆಲ್ ಮೇಲ್ಸೇತುವೆಯ ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿಯ ಗುತ್ತಿಗೆ ಪಡೆದ ಕಂಪೆನಿ ಅಲ್ಲಿ ವಾಹನ ಸಂಚಾರಕ್ಕೆ ಅಗತ್ಯವಾದ ಸೌಕರ್ಯಗಳನ್ನು ರೂಪಿಸಬೇಕು. ಅದಿಲ್ಲವಾದರೆ ಅವರ ಆದಾಯದ ಮೂಲವಾಗಿರುವ ಟೋಲ್ ಸಂಗ್ರಹಕ್ಕೆ ಅಡ್ಡಿಪಡಿಸಲಾಗುವುದು ಎಂದೂ ನಳಿನ್ ಹೇಳಿದರು.





