ಹೊಸ ಅರಣ್ಯ ನೀತಿ ಜಾರಿಗೆ ತರದಿದ್ದರೆ ಉಗ್ರ ಹೋರಾಟ: ಎಚ್ಚರಿಕೆ
ಬೆಂಗಳೂರು, ಫೆ.25: ಕೇಂದ್ರ ಸರಕಾರ ಅರಣ್ಯವಾಸಿಗಳ ಹಕ್ಕಿಗೆ ಹೊಸ ಅರಣ್ಯ ನೀತಿ ಜಾರಿಗೆ ತರುವುದು, ಕಾನೂನಿಗೆ ವ್ಯತಿರಿಕ್ತವಾಗಿ ಅರಣ್ಯವಾಸಿಗಳ ಅರ್ಜಿ ತಿರಸ್ಕಾರವಾಗಿರುವುದನ್ನು ಪುನರ್ ಪರಿಶೀಲಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಸರಕಾರ ಕೂಡಲೇ ಈಡೇರಿಸಬೇಕೆಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ, ಸುಪ್ರೀಂ ಕೋರ್ಟ್ ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುವಂತೆ ನೀಡಿರುವ ಆದೇಶಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳೇ ಹೊಣೆ. ಕಾನೂನಿಗೆ ವ್ಯತಿರಿಕ್ತವಾಗಿ ಅರ್ಜಿಗಳ ವಿಲೇವಾರಿ, ಅರ್ಥೈವಿಸುಕೆ, ಪಾರಂಪರಿಕ ಅರಣ್ಯವಾಸಿಗಳಿಗೆ ನಿರ್ದಿಷ್ಟ ದಾಖಲೆಗಳ ಸಾಕ್ಷಕ್ಕೆ ಒತ್ತಾಯಿಸುವಿಕೆ, ಒಂದೇ ದಿನ ಸಾವಿರಾರು ಅರ್ಜಿಗಳ ವಿಲೇವಾರಿ ಹಾಗೂ ಗ್ರಾಮ ಅರಣ್ಯ ಹಕ್ಕು ಸಮಿತಿಗಳಿಗೆ ಕಾನೂನಾತ್ಮಕ ಸಬಲೀಕರಣ ನೀಡದಿರುವಿಕೆ ಸೇರಿದಂತೆ ಅನೇಕ ಕಾರಣಗಳು ಅರ್ಜಿ ತಿರಸ್ಕಾರಕ್ಕೆ ಕಾರಣವಾಗಿವೆ. ಇದರಿಂದ ಲಕ್ಷಾಂತರ ಅರಣ್ಯವಾಸಿಗಳ ಬದುಕು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಆರೋಪಿಸಿದರು.
ಜನಪ್ರತಿನಿಧಿಗಳ ನಿರ್ಲಕ್ಷತನ ಹಾಗೂ ಇಚ್ಛಾಶಕ್ತಿಯ ಕೊರತೆಯಿಂದ ಉಂಟಾದ ಸಮಸ್ಯೆಗೆ ಜನಪ್ರತಿನಿಧಿಗಳೇ ಹೊಣೆಗಾರರಾಗಿದ್ದಾರೆ. 30 ವರ್ಷದಿಂದ ಎಲ್ಲಾ ಪಕ್ಷದ, ಎಲ್ಲಾ ಚುನಾವಣೆ ಪ್ರಣಾಳಿಕೆಯಲ್ಲಿ ಈ ಬಗ್ಗೆ ಪ್ರಸ್ತಾಪವಿದ್ದು, ಇದಕ್ಕೆ ಆಯಾ ಪಕ್ಷಗಳೇ ಜವಾಬ್ದಾರಿಯಾಗಿವೆ. ಇತ್ತೀಚಿನ 28 ವರ್ಷಗಳಲ್ಲಿ 13 ಬಾರಿ ಅರಣ್ಯವಾಸಿಗಳಿಂದ ಅರ್ಜಿ ಸ್ವೀಕಾರ ಮಾಡಿ ಅವರನ್ನು ನಂಬಿಸಿ ಮೋಸ ಮಾಡಲಾಗಿದೆ ಎಂದು ದೂರಿದರು. ಹಾಗಾಗಿ ಈ ರೀತಿಯ ವ್ಯತಿರಿಕ್ತವಾದ ಆದೇಶ ಬಂದಿದ್ದು, ಅರಣ್ಯವಾಸಿಗಳು ಬೀದಿಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ರಾಜ್ಯ ಮತ್ತು ಕೇಂದ್ರ ಸರಕಾರಗಳು ಅರಣ್ಯವಾಸಿಗಳ ಪರ ನಿಲುವನ್ನು ಪ್ರಕಟಿಸಬೇಕು. ಬದಲಿ ಕಾನೂನು ವ್ಯವಸ್ಥೆ ಅಥವಾ ಪುನರ್ ವಸತಿಗೆ ಆದೇಶಿಸಬೇಕು. ಕಾನೂನಿಗೆ ವ್ಯತಿರಿಕ್ತವಾಗಿ ಅರಣ್ಯವಾಸಿಗಳ ಅರ್ಜಿ ತಿರಸ್ಕರಿಸಿರುವುದನ್ನು ಪುನರ್ ಪರಿಶೀಲಿಸಬೇಕು. ಕೇಂದ್ರ ಸರಕಾರ ಅರಣ್ಯವಾಸಿಗಳ ಹಕ್ಕಿಗೆ ಹೊಸ ಅರಣ್ಯ ನೀತಿ ಜಾರಿಗೆ ತರುವುದು ಹಾಗೂ ಅರ್ಜಿಗಳು ವಿಲೇವಾರಿ ಆಗುವವರೆಗೂ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸದೆ ಇರುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಸರಕಾರ ಈಡೇರಿಸದೇ ಇದ್ದರೆ ರಾಜ್ಯವ್ಯಾಪಿ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.







