ಫೆ.27ರಂದು ರಾಜ್ಯದ ಮೊದಲ ಕಾರ್ ಉದ್ಯಾನವನ ಲೋಕಾರ್ಪಣೆ

ಬೆಂಗಳೂರು, ಫೆ.25: ಬೊಮ್ಮನಹಳ್ಳಿಯಲ್ಲಿ ನಿರ್ಮಿಸಲಾಗಿರುವ ರಾಜ್ಯದ ಮೊದಲ ಕಾರ್ ಉದ್ಯಾನವನ ಲೋಕಾರ್ಪಣೆ ಸಮಾರಂಭವನ್ನು ಫೆ.27ರಂದು ಹಮ್ಮಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಸದಸ್ಯ ರಾಮ್ ಮೋಹನರಾಜು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂರು ಅಡಿ ಎತ್ತರಕ್ಕೆ ಜೋಡಿಸಲಾಗಿರುವ ವಿಂಟೇಜ್ ಕಾರುಗಳು, 3 ಸಾವಿರ ಜನರಿಗೆ ಆಸನ ವ್ಯವಸ್ಥೆ ಇರುವ ಅತ್ಯಾಧುನಿಕ ಪರಿಕರಗಳನ್ನು ಹೊಂದಿರುವ ಬಯಲು ರಂಗ ಮಂದಿರ, ಹಕ್ಕಿಗಳ ಕಲರವ, ಸಮುದ್ರದ ಮರಳಿನ ಮೇಲೆ ಮಕ್ಕಳಿಗೆ ಆಟ ಆಡಲು ಸ್ಯಾಂಡ್ ಪಿಟ್ ವ್ಯವಸ್ಥೆ ಈ ಕಾರು ಉದ್ಯಾನವನದಲ್ಲಿ ಮಾಡಲಾಗಿದೆ ಎಂದು ತಿಳಿಸಿದರು.
ಹಲವಾರು ವರ್ಷಗಳಿಂದ ಸಮರ್ಪಕವಾಗಿ ಬಳಕೆಯಾಗದೇ ಇರುವ ಜಾಗದಲ್ಲಿ ಈ ಕಾರು ಉದ್ಯಾನವನವನ್ನು ನಿರ್ಮಾಣ ಮಾಡಲಾಗಿದೆ. ಕಸ ಹಾಗೂ ವಾಹನಗಳ ಬಿಡಿ ಭಾಗಗಳನ್ನು ಬಳಕೆ ಮಾಡಿಕೊಂಡು ಒಂದು ಮುಕ್ಕಾಲು ಎಕರೆಯಲ್ಲಿ ಎಲ್ಲರನ್ನು ಸೆಳೆಯುವಂತಹ ಉದ್ಯಾನವನ ಮಾಡಲಾಗಿದೆ ಎಂದು ಹೇಳಿದರು.
ಬೊಮ್ಮನಹಳ್ಳಿಯ ಆರ್‌ಟಿಓ ಕಚೇರಿ ಎದುರಿಗಿರುವ ಈ ಕಾರು ಉದ್ಯಾನವನವನ್ನು ಬುಧವಾರ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಲೋಕಾರ್ಪಣೆ ಗೊಳಿಸಲಿದ್ದಾರೆ. ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಶಾಸಕ ಎಂ.ಸತೀಶ್ ರೆಡ್ಡಿ ಮತ್ತಿರರು ಉಪಸ್ಥಿತರಿರಲಿದ್ದಾರೆ ಎಂದರು.







