ಲಿಂಗಾಯತ ಪ್ರತ್ಯೇಕ ಧರ್ಮದ ನನ್ನ ಅಭಿಪ್ರಾಯದಲ್ಲಿ ಬದಲಾವಣೆ ಇಲ್ಲ: ಈಶ್ವರ ಖಂಡ್ರೆ

ಉಡುಪಿ, ಫೆ. 25: ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ನನ್ನ ವೈಯ್ಯಕ್ತಿಕ. ಈ ವಿಚಾರದಲ್ಲಿ ಪಕ್ಷಗಳು ಬರುವಂತಿಲ್ಲ. ಲಿಂಗಾಯಿತ ಹಾಗೂ ವೀರಶೈವ ಎರಡೂ ಒಂದೇ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಸಚಿವನಾಗಿದ್ದಾ ಗಲೂ ಅದೇ ಅಭಿಪ್ರಾಯ ಹೇಳಿದ್ದೇನೆ. ಈಗಲೂ, ಮುಂದೆಯೂ ನನ್ನ ಅಭಿ ಪ್ರಾಯದಲ್ಲಿ ಯಾವುದೇ ಬದಲಾವಣೆ ಆಗಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮೂರು ಬಾರಿ ಸಿಎಂ ಪಟ್ಟ ಕೈತಪ್ಪಿರುವುದಾಗಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಯಾವ ಸಂದರ್ಭದಲ್ಲಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಅವರ ಅಧ್ಯಕ್ಷತೆಯಲ್ಲೇ 2013 ಚುನಾವಣೆಯನ್ನು ನಾವು ಗೆದ್ದು, ಸರಕಾರ ರಚನೆ ಮಾಡಿದ್ದೇವೆ. ಈಗಲೂ ಅವರ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದೇವೆ. ಅವರು ಈಗ ನಮ್ಮ ಪಕ್ಷದ ಉತ್ತುಂಗ ಸ್ಥಾನದಲ್ಲಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ನೀಡಿದ ಯಾವುದೇ ಭರವಸೆಯೂ ಅನುಷ್ಟಾನಕ್ಕೆ ಬಂದಿಲ್ಲ. ಬಿಜೆಪಿಯು ಭಾರತೀಯ ಜನತಾ ಪಾರ್ಟಿ ಅಲ್ಲ, ಭಾರತೀಯ ಜೂಟಾ ಪಾರ್ಟಿ ಆಗಿದೆ. ಇಂದು ಪ್ರಜಾಪ್ರಭುತ್ವ, ಸಂವಿಧಾನ ಅಪಾಯ ದಲ್ಲಿದೆ. ಸಿಬಿಐ, ಇಡಿ ಇತ್ಯಾದಿ ಕೇಂದ್ರ ಸ್ವಾಮ್ಯದ ಸಂಸ್ಥೆಗಳ ಸ್ವಾಯತತ್ತೆಯನ್ನು ಕಾಪಾಡಬೇಕಾಗಿದೆ ಎಂದು ಅವರು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಬರೀ ಪ್ರಚಾರಕ್ಕಾಗಿ ಸಫಾಯಿ ಕರ್ಮಚಾರಿಗಳ ಕಾಲು ತೊಳೆದಿದ್ದಾರೆ. ಪ್ರಚಾರಕ್ಕೆ ಐದು ಸಾವಿರ ಕೋಟಿ ಖರ್ಚು ಮಾಡುವ ಇವರಿಗೆ ಚುನಾವಣೆ ಬಂದಾಗ ಸಫಾಯಿ ಕರ್ಮಚಾರಿ ನೆನಪಾಗುತ್ತದೆ. ಇದು ಚುನಾವಣಾ ಗಿಮ್ಮಿಕ್ಕು. ಅದು ಬಿಟ್ಟರೆ ಮತ್ತೇನೂ ಅಲ್ಲ. ಕಾಂಗ್ರೆಸ್ ಎಂದಿಗೂ ಈ ರೀತಿಯ ಗಿಮಿಕ್ ಮಾಡಿಲ್ಲ. ನಮ್ಮದು ಪ್ರತಿಫಲಾಪೇಕ್ಷೆ ಇಲ್ಲದ ಸೇವೆ ಎಂದು ಅವರು ಹೇಳಿದರು.
ಬಿಜೆಪಿಯವರು ಏನೂ ಮಾಡದೆ ಮೆರೆಯುತ್ತ ಇದ್ದಾರೆ. ಆಪರೇಷನ್ ಕಮಲ ಕರ್ನಾಟಕದ ಜನತೆಗೆ ಶಾಪವಾಗಿದೆ ಎಂದ ಅವರು, ಪೌರ ಕಾರ್ಮಿಕ ರನ್ನು ನಾವು ವಿದೇಶಕ್ಕೆ ಕಳುಹಿಸಿದ್ದೇವೆ. ಪೌರ ಕಾರ್ಮಿಕರ ಸಂಬಳ ಕೂಡ ಏರಿಕೆ ಮಾಡಿದ್ದೇವೆ ಎಂದು ತಿಳಿಸಿದರು.
ಹೆಗ್ಡೆಗೆ ಕಾಂಗ್ರೆಸ್‌ನಿಂದ ಸ್ವಾಗತ
ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಪಕ್ಷಕ್ಕೆ ಬರುವುದಾದರೆ ಕಾಂಗ್ರೆಸ್ ಸ್ವಾಗತಿಸುತ್ತದೆ. ನಮ್ಮ ಪಕ್ಷ ಅಥವಾ ಯಾವುದೇ ಜಾತ್ಯಾತೀತ ಪಕ್ಷಕ್ಕೆ ಬರುವುದಾ ದರೆ ಅವರಿಗೆ ಸ್ವಾಗತ ಇದೆ. ಒಳ್ಳೆಯ ವ್ಯಕ್ತಿಯಾಗಿರುವ ಅವರು ಕಾಂಗ್ರೆಸ್ ಪಕ್ಷಕ್ಕೆ ಬರಲಿ ಎಂಬುದು ನಮ್ಮ ಆಶಯ ಎಂದು ಈಶ್ವರ ಖಂಡ್ರೆ ತಿಳಿಸಿದರು.







