ಉಡುಪಿ: ಬಿಸ್ಸೆನ್ನೆಲ್ ಗುತ್ತಿಗೆ ಕಾರ್ಮಿಕರ ವೇತನ ಪಾವತಿಗೆ ಆಗ್ರಹಿಸಿ ಧರಣಿ

ಉಡುಪಿ, ಫೆ.25: ಸಿಐಟಿಯು ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಬಿಎಸ್‌ಎನ್‌ಎಲ್ ಗುತ್ತಿಗೆ ಕಾರ್ಮಿಕರ ವೇತನ ಬಾಕಿಯನ್ನು ಕೂಡಲೇ ಪಾವತಿ ಸುವಂತೆ ಒತ್ತಾಯಿಸಿ ಉಡುಪಿ ನಗರದ ಬಿಎಸ್‌ಎನ್‌ಎಲ್ ಕಚೇರಿ ಎದುರು ಧರಣಿ ನಡೆಸಲಾಯಿತು.
ಬಿಎಸ್‌ಎನ್‌ಎಲ್ ನೌಕರರ ಸಂಘದ ಮುಖಂಡ ಶಶಿಧರ ಗೊಲ್ಲ ಮಾತ ನಾಡಿ, ಸಾರ್ವಜನಿಕ ರಂಗದ ಬಿಎಸ್‌ಎನ್‌ಎಲ್‌ಗೆ ಆರ್ಥಿಕ ಬೆಂಬಲ ನೀಡುವ ಮೂಲಕ ಅದನ್ನು ಉಳಿಸಿ ರಕ್ಷಿಸಬೇಕು. ಫೋರ್‌ಜಿ ಸೇವೆಯನ್ನು ಕೂಡಲೇ ಆರಂಭಿಸಬೇಕು. ಗ್ರಾಮೀಣ ಪ್ರದೇಶಗಳಿಗೆ ದೂರವಾಣಿ ಸಂಪರ್ಕ ಕಲ್ಪಿಸಿದ 20ಕೋಟಿ ರೂ. ಬಾಕಿ ಹಣವನ್ನು ಕೂಡಲೇ ನೀಡಬೇಕು. ಇದರಿಂದ ಬಿಎಸ್ ಎನ್‌ಎಲ್‌ನ ಆರ್ಥಿಕ ಹೊರೆಯನ್ನು ಸರಿದೂಗಿಸಬಹುದಾಗಿದೆ ಎಂದರು.
ಮಂಗಳೂರು ಹಾಗೂ ಉಡುಪಿಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ದುಡಿಯು ತ್ತಿರುವ 600 ಮಂದಿಯ ಐದು ತಿಂಗಳ ಸಂಬಳ ಬಾಕಿ ಇದ್ದು, ಕೂಡಲೇ ಆ ಹಣವನ್ನು ಬಿಡುಗಡೆ ಮಾಡಬೇಕು. ಬಿಎಸ್‌ಎಲ್‌ಎನ್‌ನಲ್ಲಿ 1.74 ಲಕ್ಷ ಖಾಯಂ ನೌಕರರಿದ್ದು, ಇವರಲ್ಲಿ 30ಸಾವಿರ ನೌಕರರನ್ನು ಕೈಬಿಡುವ ನಿರ್ಧಾರ ಸರಿಯಲ್ಲ. ಇದೀಗ ಪ್ರತಿ ತಿಂಗಳು 15ಸಾವಿರ ಖಾಯಂ ನೌಕರರು ನಿವೃತ್ತರಾಗುತ್ತಿದ್ದಾರೆ. ಹೀಗಿರುವಾಗ 30ಸಾವಿರ ಮಂದಿಯನ್ನು ಕೆಲಸದಿಂದ ತೆಗೆಯುವ ಅಗತ್ಯ ಇಲ್ಲ ಎಂದು ಅವರು ತಿಳಿಸಿದರು.
ಬಳಿಕ ಈ ಕುರಿತ ಮನವಿಯನ್ನು ಮಂಗಳೂರು ಪಿಜಿಎಂ ಮೂಲಕ ಬಿಎಸ್‌ಎನ್‌ಎಲ್ ಆಡಳಿತ ನಿರ್ದೇಶಕರಿಗೆ ಸಲ್ಲಿಸಲಾಯಿತು. ಧರಣಿಯಲ್ಲಿ ಸಿಐಟಿಯು ಮುಖಂಡರಾದ ವಿಶ್ವನಾಥ ರೈ, ಬಾಲಕೃಷ್ಣ ಶೆಟ್ಟಿ, ರಾಮ ಕರ್ಕಡ, ವಿಠಲ ಪೂಜಾರಿ, ಶೇಖರ ಬಂಗೇರ, ದಯಾನಂದ ಕೋಟ್ಯಾನ್, ಉಮೇಶ್ ಕುಂದರ್, ಮೋಹನ್ ಮೊದಲಾದವರು ಉಪಸ್ಥಿತರಿದ್ದರು.







