ಪಾಕ್ ಧ್ವಜ ಹಾರಿಸಿದವರಿಂದ ನನ್ನ ಮೇಲೆ ಗೂಬೆ ಕೂರಿಸುವ ಪ್ರಯತ್ನ: ಎಸ್.ಎಂ ಪಾಟೀಲ್ ಗಣಿಹಾರ

ವಿಜಯಪುರ,ಫೆ.25: ನನಗೆ ಪಾಕಿಸ್ತಾನದ ಮೇಲೆ ಎಳ್ಳಷ್ಟೂ ಪ್ರೀತಿ ಇಲ್ಲ. ಪಾಕ್ ಧ್ವಜ ಹಾರಿಸಿದ ವ್ಯಕ್ತಿ, ಸಂಘಟನೆ ನನ್ನ ಮೇಲೆ ವಿನಾಕಾರಣ ಗೂಬೆ ಕೂರಿಸುತ್ತಿವೆ ಎಂದು ಅಹಿಂದ ಮುಖಂಡ ಎಸ್.ಎಂ ಪಾಟೀಲ್ ಗಣಿಹಾರ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕ್ ಮೇಲೆ ನನಗೆ ಎಳ್ಳಷ್ಟೂ ಪ್ರೀತಿ, ಕಾಳಜಿ ಇಲ್ಲ. ನಾನು ಈ ದೇಶದ ನಿವಾಸಿ. ಅಪ್ಪಟ ದೇಶಪ್ರೇಮಿ ಎಂದರು.
ಪಾಕಿಸ್ತಾನದ ಮೇಲೆ ಕೇವಲ ಆರೋಪ ಮಾಡುತ್ತಾ ಕುಳಿತುಕೊಳ್ಳಬೇಡಿ. ಅಗತ್ಯವಿದ್ದಲ್ಲಿ ಯುದ್ಧ ಸಾರಿ, ಉಗ್ರವಾದ ದಮನಿಸಿ ಎಂಬ ವಾದವನ್ನು ನಾನು ಮಾಡಿದ್ದೇನೆ. ರಾಷ್ಟ್ರದ ಖ್ಯಾತ ಲೇಖಕ ಪಿಳ್ಳೆ ಸೇರಿದಂತೆ ಅನೇಕರು ಸಹ ಅನೇಕ ದೈನಿಕಗಳಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಈ ಹಿನ್ನೆಲೆಯಲ್ಲಿಯೇ ನಾನು ಪಾಕ್ ಮೇಲೆ ಬೊಟ್ಟು ಮಾಡುತ್ತಾ ಕುಳಿತುಕೊಳ್ಳದೇ ಅದಕ್ಕೆ ತಕ್ಕ ಪಾಠ ಕಲಿಸಿ, ಉಗ್ರವಾದ ದಮನಿಸಿ ಎಂದು ಒತ್ತಾಯಿಸಿದ್ದೆ. ಮುಸಲ್ಮಾನರಿಗೆ ಪಾಕ್ ಮೇಲೆ ಯಾವುದೇ ಪ್ರೀತಿ ಇಲ್ಲ. ಆದರೆ ನನ್ನ ಹೇಳಿಕೆಯನ್ನೇ ತಿರುಚಿ ಶ್ರೀರಾಮ ಸೇನೆಯಂತಹ ಸಂಘಟನೆಗಳು ನನ್ನ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿವೆ ಎಂದು ಆರೋಪಿಸಿದರು.
ಪಾಕ್ ಧ್ವಜ ಹಾರಾಟ ಮಾಡಿದ ಆರೋಪ ಹೊತ್ತಿರುವ ಶ್ರೀರಾಮ ಸೇನೆ ಸಂಘಟನೆಯವರು ಈ ರೀತಿ ಆರೋಪ ಮಾಡುತ್ತಿದ್ದಾರೆ. ಪಾಕ್ ಧ್ವಜ ಹಾರಾಟ ಮಾಡಿದ ಶ್ರೀರಾಮಸೇನೆ ಸಂಘಟನೆಯವರಿಗೆ ಪಾಕ್ ಮೇಲೆ ಪ್ರೀತಿ ಇದ್ದಂತಿದೆ ಎಂದು ವ್ಯಂಗ್ಯವಾಡಿದರು.
ನಗರದಲ್ಲಿ ಪಾಕ್ ಧ್ವಜ ಹಾರಾಟಕ್ಕೆ ಪ್ರಚೋದಿಸಿದ ವ್ಯಕ್ತಿಯೇ ಇಂದು ವಿಜಯಪುರ ನಗರ ಶಾಸಕರಾಗಿದ್ದಾರೆ. ಆದರೆ ಅವರೇ ನಿಂತು ಗೃಹ ಸಚಿವರಿಗೆ ಅಸಂಬದ್ಧ ರೀತಿಯಲ್ಲಿ ಸವಾಲು ಹಾಕಿದ್ದು ಜಗಜ್ಜಾಹೀರಾಗಿದೆ. ಶ್ರದ್ಧಾಂಜಲಿ ಸಭೆಯಲ್ಲಿ ಈ ರೀತಿ ಅಸಂಬದ್ಧವಾದ ರೀತಿಯಲ್ಲಿ ವರ್ತನೆ ಮಾಡಿದ್ದು ಎಷ್ಟು ಸರಿ ? ನನ್ನನ್ನು ಅಯೋಗ್ಯ ಎಂದಿರುವ ವಿಜಯಪುರ ನಗರ ಶಾಸಕರು ಅವರು ಎಷ್ಟು ಯೋಗ್ಯ ಎಂಬುದುನ್ನು ಮೊದಲು ತಿಳಿದುಕೊಳ್ಳಬೇಕು ಎಂದು ಟೀಕಿಸಿದರು.







